ವರ್ಗವಾದ ಶಿಕ್ಷಕರನ್ನು ರಿಲೀವ್ ಮಾಡ್ಬೇಡಿ

0208 Surapur 01
ಸುರಪುರ ತಾಪಂನಲ್ಲಿ ಬುಧವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು. ತಹಸೀಲ್ದಾರ್‌ಗಳಾದ ಸುಬ್ಬಣ್ಣ ಜಮಖಂಡಿ, ಜಗದೀಶ ಚೌರ, ಆಡಳಿತಾಧಿಕಾರಿ ಅಬೀದ್, ಇಒ ಬಸವರಾಜ ಸಜ್ಜನ್ ಇದ್ದರು.
Published on

ಸುರಪುರ: ತಾಲೂಕಿನಲ್ಲಿ ೧೦೬೭ ಶಿಕ್ಷಕರ ಹುದ್ದೆ ಖಾಲಿ ಇದ್ದು, ವರ್ಗಾವಣೆಗೊಂಡ ಶಿಕ್ಷಕರನ್ನು ಇರುವ ಶಾಲೆಯಿಂದ ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸಬಾರದು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆ ಕುರಿತು ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಶಾಲೆ ಆರಂಭವಾಗಿ ಬಹಳ ದಿನವಾದರೂ ಶೂ ಮತ್ತು ಸಾಕ್ಸ್ ಒದಗಿಸಿಲ್ಲ. ಕೂಡಲೆ ಶಿಕ್ಷಣ ಇಲಾಖೆ ನಿಯಮಾನುಸಾರ ಖರೀದಿಸಿ ಒದಗಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ೨೦೯೦ ಶಿಕ್ಷಕರ ಹುದ್ದೆಗಳಿದ್ದು, ೧೦೨೩ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ೨೦೭ ಹುದ್ದೆ ಖಾಲಿ ಇವೆ. ಉಳಿದ ಶಿಕ್ಷಕರ ಹುದ್ದೆಗಳ ಭರ್ತಿಗೆ ಸಚಿವರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೆಲ ಶಾಲೆಗಳಲ್ಲಿರುವ ೭ ಜನರಲ್ಲಿ ೬ ಜನರು ವರ್ಗಾವಣೆಯಾದರೆ ಶಾಲೆ ಹೇಗೆ ನಡೆಯಬೇಕು ? ಇಂತಹ ಯಾವುದೇ ಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎಂದು ಬಿಇಒಗೆ ತಾಕೀತು ಮಾಡಿದರು.

ಆರೋಗ್ಯ ಇಲಾಖೆಯು ಜನರ ಆರೋಗ್ಯ ಕಾಪಾಡುವಲ್ಲಿ ಹಿಂದೇಟು ಹಾಕಬಾರದು.ಕುಷ್ಠರೋಗ ಮತ್ತು ಕ್ಷಯ ನಿಯಂತ್ರಿಸಬೇಕು. ಕಾಲಕಾಲಕ್ಕೆ ತಪಾಸಣೆ ನಡೆಸಿ ರೋಗದ ತೀವ್ರತೆಗೆ ತಕ್ಕಂತೆ ಚಿಕಿತ್ಸೆ ನೀಡಬೇಕು. ಕ್ಷಯರೋಗದ ಪ್ರಮಾಣ ತೀವ್ರವಾಗಿದ್ದು, ಗಂಭೀರ ಪರಿಗಣಿಸಿ ನಿಯಂತ್ರಿಸುವ ಕೆಲಸ ಮಾಡಬೇಕು. ೮ ಆರೋಗ್ಯ ಪ್ರಾಥಮಿಕ ಕೇಂದ್ರಗಳನ್ನು ನಿರ್ಮಿಸಲಾಗುವುದು. ದೇವಾಪುರ ಮತ್ತು ನಾರಾಯಣಪುರದಲ್ಲಿ ಸ್ಥಳ ಗುರುತಿಸಲಾಗುವುದು ಎಂದು ಹೇಳಿದರು.

ಶಿಶು ಅಭಿವೃದ್ಧಿ ಇಲಾಖೆಯು ಮಕ್ಕಳಿಗೆ ಗುಣಮಟ್ಟದ ಮೊಟ್ಟೆ ನೀಡಬೇಕು. ಸಮರ್ಪಕವಾಗಿ ಆಹಾರ ಸಾಮಗ್ರಿ ಪೂರೈಸಬೇಕು. ಸಾರಿಗೆ ಇಲಾಖೆ ಬಸ್ ಕೊರತೆ ಇರುವ ಬೈಚಬಾಳ, ಹೊನ್ನಾಪುರ, ಕನ್ನೆಳ್ಳಿಗೆ ಬಸ್ ಸಂಚರಿಸಬೇಕು. ೨೦ ಹೊಸ ಬಸ್, ೪೦ ಸಿಬ್ಬಂದಿ ನೇಮಕಕ್ಕೆ ಸಿಎಂ ಜತೆ ಮಾತನಾಡುವೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಸರ್ಕಾರದಿಂದ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಹುಣಸಗಿ ತಾಲೂಕಿನಲ್ಲಿ ೮ ಸಾವಿರ, ಸುರಪುರದಲ್ಲಿ ೨೪ ಸಾವಿರ ಕುಟುಂಬ ನೋಂದಣಿಯಾಗಿವೆ. ಸರಾಸರಿ ಶೇ.೪೦ ದಾಟಿಲ್ಲ. ಕೂಡಲೆ ಶೇ.೧೦೦ ನೋಂದಣಿಗೆ ಕ್ರಮ ಕೈಗೊಳ್ಳಲು ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸುರಪುರ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಸೀಲ್ದಾರ್ ಜಗದೀಶ ಚೌರ, ತಾಪಂ ಆಡಳಿತಾಧಿಕಾರಿ ಅಬೀದ್ ಎಸ್., ತಾಪಂ ಇಒಗಳಾದ ಬಸವರಾಜ ಸಜ್ಜನ್, ಬಸಯ್ಯ ಹಿರೇಮಠ ಇತರರು ಇದ್ದರು.

ಅಧಿಕಾರಿಗಳ ನಡೆಗೆ ಬೇಸರ
ಪ್ರಗತಿ ಪರಿಶೀಲನಾ ಸಭೆಗೆ ತಡವಾಗಿ ಬಂದ ಅಧಿಕಾರಿಗಳ ವಿರುದ್ಧ ಶಾಸಕ ರಾಜಾ ವೆಂಕಟಪ್ಪ ನಾಯಕ ಬೇಸರ ವ್ಯಕ್ತಪಡಿಸಿ, ಹಿಂದಿನ ಚಾಳಿ ಅಧಿಕಾರಿಗಳು ಬಿಡಬೇಕು. ಇಲ್ಲವಾದಲ್ಲಿ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಸಾವಿರ ಜನಕ್ಕೆ ಒಬ್ಬರಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿದ್ದಾರೆ. ಐದು ಸಾವಿರಕ್ಕಿಂತ ಹೆಚ್ಚು ಮಕ್ಕಳು ಲಸಿಕೆಯಿಂದ ಹೊರಗುಳಿಯುತ್ತಿದ್ದಾರೆ ಎಂದರೆ ಏನರ್ಥ? ಪ್ರತಿಯೊಬ್ಬರನ್ನು ಸಂಪರ್ಕಿಸಿ ಲಸಿಕೆ ನೀಡಬೇಕು.
| ರಾಜಾ ವೆಂಕಟಪ್ಪ ನಾಯಕ ಶಾಸಕ ಸುರಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net