ವರುಣಾರ್ಭಟಕ್ಕೆ ವ್ಯಾಪಕ ಬೆಳೆ, ಆಸ್ತಿ ಹಾನಿ

1310Klb08
Published on

ಕಲಬುರಗಿ: ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ತೊಗರಿ, ಕಬ್ಬು, ಹತ್ತಿ ಇತರ ಬೆಳೆಗಳು ಹಾನಿಯಾಗಿವೆ. ಕಾಗಿಣಾ ನದಿ, ಹಳ್ಳಗಳಲ್ಲಿ ಪ್ರವಾಹ ಕಾಣಿಸಿಕೊಂಡಿದ್ದರಿಂದ ಸೇತುವೆ, ರಸ್ತೆ ಇತರ ಸರ್ಕಾರಿ ಆಸ್ತಿಗೆ ಧಕ್ಕೆಯಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನರು ತಾಪತ್ರಯಕ್ಕೆ ಸಿಲುಕಿದ್ದಾರೆ. ಇನ್ನೂ ಮೂರು ದಿನ ಭಾರಿ ಮಳೆ ಮತ್ತು ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಭೀಮೆ ಸಹ ಕೆಂಪಾಗುವ ಸಾಧ್ಯತೆ ಇದೆ.
ತೊಗರಿ ಕಣಜದಲ್ಲಿ ಬಿತ್ತನೆಯಾಗಿರುವ ತೊಗರಿಗೆ ಭಾರಿ ಪೆಟ್ಟು ಬಿದ್ದಿದೆ. ತೋಟಗಾರಿಕೆ ಬೆಳೆಗಳು ಹಾನಿಯಾಗುತ್ತಿವೆ. ಚಿಂಚೋಳಿ ತಾಲೂಕಿನಲ್ಲಿ ಅರಿಷಿಣ ನೀರಲ್ಲಿ ನಿಂತಿದೆ. ಮಂಗಳವಾರ ಮಳೆ ಕೊಂಚ ವಿರಾಮ ನೀಡಿದರೂ ಮೋಡಕವಿದ ವಾತಾವರಣ ಮುಂದುವರಿದಿತ್ತು. ಮುಳುಗಡೆ ಆಗಿದ್ದ ಬಹುತೇಕ ಮುಖ್ಯ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿದ್ದವು. ಮತ್ತೆ ಸಂಜೆ ಹೊತ್ತಿಗೆ ಮಳೆ ಹನಿಯಲು ಶುರುವಾಗಿತ್ತು.
ಸಿಡಿಲು ಬಡಿದು ಚಿತ್ತಾಪುರ ತಾಲೂಕಿನ ಅಳ್ಳೋಳ್ಳಿಯಲ್ಲಿ ಅಯ್ಯಪ್ಪ ಎಂಬುವರು ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿದೆ. ನಿರಂತರ ಮಳೆಯಿಂದಾಗಿ 80ಕ್ಕೂ ಹೆಚ್ಚಿನ ಮನೆಗಳು ಭಾಗಶಃ ಬಿದ್ದಿವೆ. ದಂಡೋತಿ, ಮಳಖೇಡ ಸೇತುವೆಗೆ ಧಕ್ಕೆಯಾಗಿವೆ. ಹಳ್ಳಗಳಿಗೆ ನಿಮರ್ಿಸಿದ ಸಣ್ಣ ಸೇತುವೆಗಳು ಕೊಚ್ಚಿ ಹೋಗಿವೆ. ಅಂದಾಜಿನಂತೆ 100 ಕೋಟಿ ರೂ. ಮೌಲ್ಯದ ತೊಗರಿ, ಕಬ್ಬು, ಹತ್ತಿ ಇತರ ಬೆಳೆಗಳು ಹಾನಿಯಾಗಿವೆ. ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದ್ದರಿಂದ ಹಿಂಗಾರು ಬಿತ್ತನೆಗೂ ಹಿನ್ನಡೆಯಾಗಿದೆ.
ಚಿಂಚೋಳಿ, ಸೇಡಂ, ಚಿತ್ತಾಪುರ, ಶಹಾಬಾದ್, ಕಮಲಾಪುರ, ಯಡ್ರಾಮಿ, ಅಫಜಲಪುರ, ಆಳಂದ, ಕಲಬುರಗಿ ತಾಲೂಕುಗಳಲ್ಲಿ ಬಿರುಸಿನ ಮಳೆಯಾಗಿದೆ. 15 ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಚಿತ್ತಾಪುರ ಕ್ಷೇತ್ರ ಸೇರಿ ಹಲವೆಡೆ ರಸ್ತೆಗಳು ಹಾಳಾಗಿವೆ.
ಈ ಮಧ್ಯೆ ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ವಿಜಯಾ ಜೋತ್ಸ್ನಾ ಅವರು ಕಂದಾಯ, ಕೃಷಿ ಅಧಿಕಾರಿಗಳ ಸಭೆ ನಡೆಸಿ ಹಾನಿ ಮಹಿತಿ ಕಲೆ ಹಾಕಲು ಸೂಚಿಸಿದ್ದಾರೆ. ಬಳಿಕವೇ ನಷ್ಟದ ಪ್ರಮಾಣ ನಿಖರವಾಗಿ ಗೊತ್ತಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net