ವರುಣನ ಕೃಪೆಯಿಂದ ಕೃಷಿ ಚಟುವಟಿಕೆ ಬಿರುಸು

krishi fast
ಬೀರೂರು ಸಮೀಪದ ಯರೇಹಳ್ಳಿ ಗ್ರಾಮದಲ್ಲಿ ಟೊಮ್ಯಾಟೊ ಬೆಳೆಯ ರೋಗಬಾಧೆಗೆ ರೈತ ಜಯಪ್ಪ ಕೀಟನಾಶಕ ಸಿಂಪಡಣೆ ಮಾಡುತ್ತಿರುವುದು.
Published on

ಬೀರೂರು:ಮುಂಗಾರು ಹಂಗಾಮು ತಡವಾಗಿದ್ದರೂ ಮಳೆ ಉತ್ತಮವಾಗಿಯೇ ಬಂದಿದೆ. 10-12 ದಿನ ಹಿಡಿದಿದ್ದ ಮಳೆ ಎರಡು ದಿನಗಳಿಂದ ಬಿಡುವು ನೀಡಿದ ಪರಿಣಾಮ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಬೀರೂರು ಹೋಬಳಿಯಾದ್ಯಂತ ಈಗಾಗಲೇ 1 ಸಾವಿರ ಹೆಕ್ಟೇರ್ ಸೂರ್ಯಕಾಂತಿ ಬೆಳೆ ಹೂವಾಗಿದೆ. 1500 ಹೆಕ್ಟೇರ್ ಮೆಕ್ಕೆಜೋಳ ತೆನೆ ಕಟ್ಟುವ ಹಂತದಲ್ಲಿದೆ. ಸೂರ್ಯಕಾಂತಿ ಬಿತ್ತನೆ ಭಾಗಶಃ ಗುರಿ ಮುಟ್ಟಿದೆ. 689 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿದ್ದು ಈರುಳ್ಳಿ ಗಡ್ಡೆಯಾಗುವ ಸ್ಥಿತಿ ತಲುಪಿದೆ. ಶೇಂಗಾ ಕಾಯಿ ಕಟ್ಟುವ ಹಂತದಲ್ಲಿದೆ. ಸಲಿನಲ್ಲಿ ಬೆಳೆದಿರುವ ಕಳೆ ತೆಗೆಯುವ ಮತ್ತು ರೋಗದ ಭೀತಿಯಿಂದ ಔಷಧ ಸಿಂಪಡಣೆ ಕಾರ್ಯದಲ್ಲಿ ರೈತರು ತಲ್ಲೀನರಾಗಿದ್ದಾರೆ.
ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು ಇನ್ನೂ 2 ಸಾವಿರ ಹೆಕ್ಟೇರ್ ಬಿತ್ತನೆಯಾಗಬೇಕಿದೆ. ಅದಕ್ಕಾಗಿ ರೈತರು ಭೂಮಿ ಸಿದ್ಧಪಡಿಸಲು ಮುಂದಾಗಿದ್ದಾರೆ. ಈ ಬಾರಿ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು ಉತ್ತಮವಾದ ಸಲು ತೆಗೆಯುವ ಹುರುಪಿನಲ್ಲಿ ಕೆಲ ರೈತರು ಟೊಮ್ಯಾಟೊ ಬೆಳೆಯಲು ಮುಂದಾಗಿದ್ದಾರೆ.
ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಯನ್ನು ಪಕ್ಷಿಗಳಿಂದ ಕಾಪಾಡಲು ಕೃಷಿಕರು ಹರಸಾಹಸಪಡುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಹೊಲದ ಸುತ್ತಲೂ ಡಬ್ಬಗಳನ್ನು ಹಿಡಿದು ಸಾಗುವ ರೈತರು ಕೂಗಿಕೊಂಡು ಹಕ್ಕಿಗಳನ್ನು ಬೆದರಿಸುತ್ತಿದ್ದಾರೆ. ಇನ್ನೂ ಕೆಲವರು ಇಂದಿನ ಆಧುನಿಕತೆಗೆ ತಕ್ಕಂತೆ ಕೂಗುವ ಶಬ್ದವನ್ನು ರೆಕಾರ್ಡ್ ಮಾಡಿಕೊಂಡು ಸ್ಪೀಕರ್ ಇಟ್ಟು ಆನ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net