

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಬುಧವಾರ ಅಬ್ಬರಿಸಿದ ವರುಣ ಗುರುವಾರ ಬಿಡುವು ನೀಡಿದ್ದಾನೆ. ಗುರುವಾರ ಎಲ್ಲೆಡೆ ಮೋಡದ ವಾತಾವರಣವಿತ್ತು. ಆದರೆ, ಬುಧವಾರ ಸುರಿದ ಮಳೆಯಿಂದ ಗದ್ದೆಗಳಲ್ಲಿ ನೀರು ತುಂಬಿ ಭಾರಿ ಹಾನಿ ಸಂಭವಿಸಿದೆ.
ಕರಾವಳಿಯ ವಿವಿಧ ತಾಲೂಕುಗಳಲ್ಲಿ ಕೊಯ್ಲಿಗೆ ಬಂದಿದ್ದ 50 ಹೆಕ್ಟೇರ್ಗೂ ಅಧಿಕ ಭತ್ತದ ಪೈರು ನಾಶವಾಗಿರಬಹುದು ಎಂದು ಅಂದಾಜಿಸಲಾಗಿದೆ. ಕೊಯ್ದಿಟ್ಟ ಭತ್ತದ ಪೈರೂ ನಾಶವಾಗಿದೆ.
ಕಾರವಾರ ಕಡಿಯೆ, ಬರ್ಗಲ್, ಬೇಳೂರು, ಶಿರ್ವೆ, ನಿವಳಿ ಸೇರಿ ವಿವಿಧೆಡೆ ಗದ್ದೆಗಳಲ್ಲಿ ನೀರು ತುಂಬಿ ಹಾನಿಯಾಗಿದೆ. ಕೆಲವೆಡೆ ಮಣ್ಣು ಬಂದು ತುಂಬಿಕೊಂಡಿದೆ.
ಹೊನ್ನಾವರ ತಾಲೂಕಿನ ಕಡ್ನೀರ ಭಾಗದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಗದ್ದೆ ಹಾಗೂ ತೋಟಗಳಿಗೆ ಹಾನಿಯಾಗಿದೆ. ದೋಸೆಕಟ್ಟು, ಕೊಪ್ಪನಮಕ್ಕಿ, ಮೋಲಿಗದ್ದೆ, ಕೆಳಗಿನಕೇರಿ, ಕಾರಗದ್ದೆ ಭಾಗವಾಗಿ ಚಂದಾವರಕ್ಕೆ ಸೇರುವ ಹಳ್ಳದ ನೀರು ನುಗ್ಗಿದೆ.
ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಎದ್ದಿದ್ದು, ಕೇರಳ, ಗೋವಾ ಮಲ್ಪೆಯ ನೂರಕ್ಕೂ ಅಧಿಕ ಬೋಟ್ಗಳು ಕಾರವಾರ ತೀರಕ್ಕೆ ಬಂದು ಆಶ್ರಯ ಪಡೆದಿವೆ. ಬೈತಖೋಲ್ ಬಂದರು ಹಾಗೂ ಟ್ಯಾಗೋರ್ ತೀರ ಸಮೀಪ ಅಲ್ಲಲ್ಲಿ ಲಂಗರು ಹಾಕಿವೆ. ಸ್ಥಳೀಯ ಬೋಟ್ಗಳು ಮೀನುಗಾರಿಕೆಗೆ ತೆರಳಿಲ್ಲ. ಅ.16ರಂದು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಕೊನೆಯ ಎಚ್ಚರಿಕೆ
ಸೂಪಾ ಜಲಾಶಯದಿಂದ ನೀರು ಹೊರಬಿಡುವ ಕೊನೆಯ ಮುನ್ನೆಚ್ಚರಿಕೆಯನ್ನು ಕರ್ನಾಟಕ ವಿದ್ಯುತ್ ನಿಗಮ ನೀಡಿದೆ. 564 ಮೀಟರ್ ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ ಬೆಳಗಿನವರೆಗೆ 558.68 ಮೀಟರ್ ನೀರು ಸಂಗ್ರಹವಾಗಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಯಾವುದೇ ಕ್ಷಣದಲ್ಲಿ ನೀರನ್ನು ಹೊರ ಬಿಡಬಹುದು. ಜನ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.
ಕರಾವಳಿಯಲ್ಲಿ ಹೆಚ್ಚು ಮಳೆ
ಜಿಲ್ಲೆಯ ಕರಾವಳಿಯ ಎಲ್ಲ ತಾಲೂಕುಗಳಲ್ಲಿ ಕನಿಷ್ಠ 100 ಮಿಮೀಗಿಂತ ಹೆಚ್ಚು ಮಳೆಯಾಗಿದೆ. ಅಂಕೋಲಾದಲ್ಲಿ 105, ಭಟ್ಕಳದಲ್ಲಿ 131, ಹೊನ್ನಾವರದಲ್ಲಿ 105.4, ಕಾರವಾರದಲ್ಲಿ 107, ಕುಮಟಾದಲ್ಲಿ 197.4, ಹಳಿಯಾಳದಲ್ಲಿ 2.2, ಮುಂಡಗೋಡಿನಲ್ಲಿ 2, ಸಿದ್ದಾಪುರದಲ್ಲಿ 81.2, ಶಿರಸಿಯಲ್ಲಿ 92.5, ಜೊಯಿಡಾದಲ್ಲಿ 34, ಯಲ್ಲಾಪುರದಲ್ಲಿ 24.6 ಮಿಮೀ ಮಳೆಯಾಗಿದೆ.
ಇದುವರೆಗೆ 901 ಹೆಕ್ಟೇರ್ ಹಾನಿ
ಜಿಲ್ಲೆಯಲ್ಲಿ ಈ ವರ್ಷ 70317 ಹೆಕ್ಟೇರ್ ಬಿತ್ತನೆಯಾಗಿದ್ದು, ಅದರಲ್ಲಿ ಇದುವರೆಗೆ 901.45 ಹೆಕ್ಟೇರ್ ಹಾನಿಯಾಗಿದೆ. ಕಾರವಾರದಲ್ಲಿ 1.36, ಅಂಕೋಲಾದಲ್ಲಿ 215.28, ಕುಮಟಾದಲ್ಲಿ 46.66,ಹೊನ್ನಾವರದಲ್ಲಿ 26.09, ಭಟ್ಕಳದಲ್ಲಿ 19.89, ಶಿರಸಿಯಲ್ಲಿ 42.90, ಸಿದ್ದಾಪುರದಲ್ಲಿ 63.77, ಯಲ್ಲಾಪುರದಲ್ಲಿ 137, ಮುಂಡಗೋಡಿನಲ್ಲಿ 150, ಹಳಿಯಾಳದಲ್ಲಿ 142, ಜೊಯಿಡಾದಲ್ಲಿ 42.50, ದಾಂಡೇಲಿಯಲ್ಲಿ 14 ಹೆಕ್ಟೇರ್ ಕೃಷಿ ಭೂಮಿ ಅತಿವೃಷ್ಟಿಯಿಂದ ಹಾನಿಯಾಗಿದೆ.
.ಕೊಚ್ಚಿ ಹೋದ ಕಾಲು ಸೇತುವೆಗಳು
ಅಂಕೋಲಾ: ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಮಾರುಗದ್ದೆ, ಮಕ್ಕಿಗದ್ದೆ ವ್ಯಾಪ್ತಿಯಲ್ಲಿ 53 ರೈತರ ಗದ್ದೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇದೇ ಭಾಗದಲ್ಲಿ ಎರಡು ಕಾಲು ಸಂಕದ ಪಿಚ್ಚಿಂಗ್ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತವಾಗಿದೆ. ಅಗಸೂರು ಹೊನ್ನಳ್ಳಿ ಭಾಗದಲ್ಲಿ ಈಗಾಗಲೇ ಕೊಯ್ಲು ಮಾಡಿಟ್ಟಿದ್ದ ಭತ್ತದ ಪೈರು ನೀರು ತುಂಬಿಕೊಂಡು ಹಾನಿಯಾಗಿದೆ. ಹಳ್ಳದ ತಡೆಗೋಡೆ ಒಡೆದು ತೋಟಗಳಿಗೆ ನೀರು ನುಗ್ಗಿದ್ದು, ಫಸಲಿಗೆ ಬರುವ ಹಂತದಲ್ಲಿದ್ದ ಅಡಕೆ ಮರಗಳಿಗೆ ಹಾನಿಯಾಗಿದೆ. ಅಂಕೋಲಾ ತಾಲೂಕಿನಲ್ಲಿ ಅಪಾರ ಹಾನಿ ಸಂಭವಿಸಿದ್ದು, ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತರಾಗಿ ಜನರ ರಕ್ಷಣೆಗೆ ಮುಂದಾಗಬೇಕು. ಸೂಕ್ಷ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರಾಂತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಆಗ್ರಹಿಸಿದ್ದಾರೆ.
-----------
ಮಳೆ ಸಂತ್ರಸ್ತರಿಗೆ ಪರಿಹಾರ ನೀಡಲು ಆರ್ವಿಡಿ ಆಗ್ರಹ
ಹಳಿಯಾಳ: ಅಕಾಲಿಕವಾಗಿ ಆರಂಭಗೊಂಡಿರುವ ಮಳೆಯಿಂದ ಬೆಳೆ, ತರಕಾರಿ ಮತ್ತು ಪುಷ್ಪ ಹಾನಿಗೊಳಗಾದ ರೈತರಿಗೆ, ಮೀನುಗಾರಿಕೆ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಂದಾಯ ಸಚಿವ ಆರ್. ಅಶೋಕ, ಕೃಷಿ ಸಚಿವ ಬಿ.ಸಿ. ಪಾಟೀಲ, ತೋಟಗಾರಿಕೆ ಸಚಿವ ಕೆ.ಸಿ. ನಾರಾಯಣಗೌಡ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ. ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ಪ್ರದೇಶದಲ್ಲಿ ಭತ್ತ, ಕಬ್ಬು, ಮೆಕ್ಕೆಜೋಳ, ಹತ್ತಿ, ತರಕಾರಿ ಹಾಗೂ ತೋಟಗಾರಿಕೆ ಬೆಳೆ ಬೆಳೆದು ಬಂಪರ್ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ಫಸಲು ಕಟಾವು ಹಂತದಲ್ಲಿರುವಾಗಲೇ ಗಾಯದ ಮೇಲೆ ಬರೆ ಎಳೆದಂತೆ ಸುರಿದ ಅಕಾಲಿಕ ಮಳೆಗೆ ಎಲ್ಲವೂ ಕೊಚ್ಚಿಹೋಗಿ, ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಒಟ್ಟಾರೆಯಾಗಿ ಜನರ ಜೀವನ ದುಸ್ತರವಾಗಿದೆ. ಕರಾವಳಿ ಪ್ರದೇಶದಲ್ಲಿ ಗಾಳಿ ಸಮುದ್ರದ ಅಲೆಗಳ ಅಬ್ಬರಕ್ಕೆ ಮತ್ಸೊ್ಯೕದ್ಯಮ ಸಂಪೂರ್ಣ ತತ್ತರಿಸಿದ್ದು, ಮೀನುಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಜನವಸತಿ ಪ್ರದೇಶಗಳಿಗೂ ಮಳೆ ನೀರು ನುಗ್ಗಿ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿರುತ್ತದೆ. ಭಾಗಶಃ/ಪೂರ್ಣ ಪ್ರಮಾಣದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ, ರೈತರಿಗೆ, ಕೂಲಿ ಕಾರ್ವಿುಕರಿಗೆ ನೆರವಾಗಬೇಕಾಗಿರುವುದು ಅತೀ ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ.
------------------------
ಫೋಟೋ : 15ಕೆಎಂಟಿ4ಎ: ಮಾವಿನಗದ್ದೆಯಲ್ಲಿ ನೀರಿನ ಸೆಳವಿಗೆ ಸಿಲುಕಿದ ಪೈಪ್ಗಳು.
ಫೋಟೋ : 15ಕೆಎಂಟಿ4ಸಿ: ಸಂತೆಗುಳಿಯಲ್ಲಿ ಹಾನಿಗೊಳಗಾದ ಭತ್ತದ ಗದ್ದೆ.
ಸಂತೆಗುಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಹಾನಿ
ಕುಮಟಾ: ತಾಲೂಕಿನಲ್ಲಿ ಬುಧವಾರ ರಾತ್ರಿ ವಿಪರೀತ ಮಳೆಯಾಗಿದ್ದು, ಸಂತೆಗುಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಹಾನಿಯಾಗಿದೆ.
ತಪ್ಪಲು ಪ್ರದೇಶದಲ್ಲಿ ಬೆಟ್ಟದ ಮೇಲಿಂದ ಮಳೆ ನೀರು ಪ್ರವಾಹದಂತೆ ಹರಿದುಬಂದು ಅಬ್ಬರಿಸಿದೆ. ಎತ್ತರ ಪ್ರದೇಶದಲ್ಲಿನ ಮನೆಗಳಿಗೂ ನೀರು ನುಗ್ಗಿದ್ದರಿಂದ ರಾತ್ರೋರಾತ್ರಿ 35ಕ್ಕೂ ಹೆಚ್ಚು ಕುಟುಂಬಗಳು ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿವೆ. ಬೆಟ್ಟದ ಕಡೆಯಿಂದ ಪ್ರವಾಹ ಬಂದು ತೋಟ, ಗದ್ದೆ, ಕಟ್ಟಡಗಳು, ಕಾಂಪೌಂಡ್ಗಳಿಗೆ ಹಾನಿಯಾಗಿದೆ. ಮುಖ್ಯವಾಗಿ ಸಂತೇಗುಳಿ, ಉಳ್ಳೂರಮಠ, ದೊಡ್ಡಕುಂಬ್ರಿ, ಬಸ್ತಿಕೇರಿ, ಮಾವಿನಗದ್ದೆ ಮುಂತಾದ ಗ್ರಾಮಗಳಲ್ಲಿ ಪ್ರವಾಹ ತನ್ನ ಪ್ರಕೋಪ ತೋರಿಸಿದೆ.
ಸಂತೇಗುಳಿಯ ಜಮೀಲಾಬಿಸಾಬ್ ಅವರ ಮನೆಗೆ ನೀರು ನುಗ್ಗಿ ಗೊಬ್ಬರ, ನೂರಾರು ಅಡಕೆ ಸಸಿಗಳು, ಎರಡು ದನ, ಇನ್ನಿತರ ಪರಿಕರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೆಗಡೆ ಹೊಸಳ್ಳಿಯ ಆಬ್ದುಲ್ ರವೂಫ್ ತೋಟದಲ್ಲೂ ಅಪಾರ ಪ್ರಮಾಣದ ಹಾನಿಯಾಗಿದೆ. ಜಾನಕಿ ನಾಗಪ್ಪ ನಾಯ್ಕ ಅವರ ತೋಟ, ಭತ್ತದ ಗದ್ದೆ, ಭದ್ರಾವತಿ ತಿಮ್ಮಣ್ಣ ನಾಯ್ಕ ಅವರ ಮನೆಗೆ ನೀರು ನುಗ್ಗಿ ಪಾತ್ರೆಗಳು ಕೊಚ್ಚಿಹೋಗಿವೆ. ರತ್ನಾ ನಾಗೇಶ ಭಂಡಾರಿ ಎಂಬುವವರ ಮನೆ ಬೀಳುವ ಹಂತ ತಲುಪಿದೆ. ದೊಡ್ಡಕುಂಬ್ರಿಯ ಶೌಕತ್ಅಲಿ ಶೇಖ್, ಸೈಯದ್ ಅಬ್ದುಲ್ ಮುಂತಾದವರ ಸಾವಿರಾರು ಅಡಕೆ, ಬಾಳೆ ಗಿಡಗಳು, ನೀರಾವರಿಗೆ ಹಾಕಿದ್ದ ಪೈಪುಗಳು ಕೊಚ್ಚಿಹೋಗಿವೆ. ಪ್ರವಾಹದ ವೇಗಕ್ಕೆ ಉಳ್ಳೂರಮಠ ರಸ್ತೆಯೂ ಹಲವು ಕಡೆಗಳಲ್ಲಿ ಕಿತ್ತು ಕೊರಕಲುಗಳಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.
ಸ್ಥಳಕ್ಕೆ ಜಿಪಂ ಸದಸ್ಯ ಗಜಾನನ ಪೈ, ವಿನಾಯಕ ಭಟ್, ತಾಪಂ ಇಒ ಸಿ.ಟಿ. ನಾಯ್ಕ, ಎಇ ರಾಮದಾಸ ಗುನಗಿ, ತೋಟಗಾರಿಕೆ ಅಧಿಕಾರಿ ಪ್ರವೀಣ, ಕೃಷಿ ಸಹಾಯಕ ನಿರ್ದೇಶಕಿ ಚಂದ್ರಕಲಾ ಬರ್ಗಿ, ಪಿಡಿಒ ಬಾಲಚಂದ್ರ ಪಟಗಾರ, ಕಂದಾಯ ಅಧಿಕಾರಿಗಳು ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯರಾದ ಸುರೇಶ ನಾಯ್ಕ, ಸಿರಿಲ್ ಸಂತಾನ್, ಭಾರತಿ ರಾಜೇಂದ್ರ, ಜನಿಕಾ ಮಹಮದ್, ಅಹಮದ್ ಅಬುಸಾಬಿ ಇತರರಿದ್ದರು.
ತಾಲೂಕಿನ ಕೋನಳ್ಳಿ, ಗುಡ್ನಕಟ್ಟು ಭಾಗದಲ್ಲೂ ಚಂದಾವರ ಹೊಳೆ ತುಂಬಿ ಹರಿದು ಪ್ರವಾಹ ಪರಿಸ್ಥಿತಿ ನಿರ್ವಣವಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಗುರುವಾರ ಮಳೆ ಕಡಿಮೆಯಾಗಿ ಪರಿಸ್ಥಿತಿ ಎಲ್ಲೆಡೆ ಸುಧಾರಿಸಿದೆ.
EndFragment