

ರೋಣ: ತಾಲೂಕಿನ ಕೆಲ ಗ್ರಾಮಗಳಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಗ್ರಾಮೀಣ ಜನರ ಜನಜೀವನ ಅಸ್ತವ್ಯಸ್ತವಾಗಿದ್ದು, ಭೀತಿಗೊಳಗಾದ ಜನರು ರಾತ್ರಿಪೂರ್ತಿ ಜಾಗರಣೆ ಮಾಡುತ್ತಿದ್ದಾರೆ.
ಕೆಲ ಗ್ರಾಮಗಳಲ್ಲಿ ವಾಡಿಕೆಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಮಳೆ ಸುರಿಯುತ್ತಿದೆ. ಹೀಗಾಗಿ ತಾಲೂಕಿನ ರೋಣ, ಸವಡಿ, ಚಿಕ್ಕಮಣ್ಣೂರ, ಹೊನ್ನಾಪೂರ, ಸಂದಿಗವಾಡ, ಅರಹುಣಸಿ ಸೇರಿದಂತೆ ಕೆಲ ಗ್ರಾಮಜೀವನ ತತ್ತರಿಸಿದೆ.
ಸವಡಿ, ಮಲ್ಲಾಪೂರ ಗ್ರಾಮಗಳ ಹಳ್ಳಗಳು ತುಂಬಿ ಹರಿಯುತ್ತಿವೆ. ಸಂಪರ್ಕ ರಸ್ತೆಗಳು ಕಾಲುವೆಗಳಾಗಿ ಮಾರ್ಪಟ್ಟಿವೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಇನ್ನು ಕೆಲ ಮನೆಗಳ ಮಳೆಯ ರಭಸಕ್ಕೆ ನೆಲ ಕಚ್ಚಿವೆ.