ವರುಣನ ಅಬ್ಬರಕ್ಕೆ ಜನ ತತ್ತರ

bidar male 2
ಬೀದರ್‌ನ ಬಸವೇಶ್ವರ ವೃತ್ತ ಸಮೀಪದ ರೈಲ್ವೆ ಕೆಳಸೇತುವೆ ಕೆಳಗೆ ಸಂಗ್ರಹಗೊಂಡಿದ್ದ ನೀರಿನಲ್ಲಿಯೇ ವಾಹನಗಳು ಸಂಚರಿಸಿದವು.
Published on

ಬೀದರ್: ನಗರ ಸೇರಿ ಜಿಲ್ಲಾದ್ಯಂತ ಗುರುವಾರವೂ ಮಳೆ ಮುಂದುವರಿದಿದೆ. ಸೋಮವಾರ ರಾತ್ರಿ ಶುರುವಾದ ಸಾಧಾರಣೆ ಮಳೆ ಆಗಾಗ್ಗೆ ಕೆಲಕಾಲ ವಿರಾಮ ನೀಡಿ ಮತ್ತೆ ಸುರಿಯುತ್ತಿದೆ. ಬುಧವಾರದಂತೆ ಗುರುವಾರವೂ ದಿನವಿಡೀ ಜಿಟಿಜಿಟಿ ಮಳೆ ಸುರಿದಿದೆ. ಸತತ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.

ಜಿಲ್ಲೆಯ ಬಹುತೇಕ ಕಡೆ ತಂಪು ಗಾಳಿ ಜತೆಗೆ ಜಡಿ ಮಳೆ ಸಾಮಾನ್ಯವಾಗಿದೆ. ಇದರ ಮಧ್ಯೆ ಕೆಲವೊಮ್ಮೆ ಗಾಳಿ ಬೀಸುತ್ತ ಭಾರಿ ಮಳೆ ಬರುತ್ತಿದೆ. ಎರಡು ದಿನದಲ್ಲಿ ಸರಾಸರಿ ೭೦ ಮಿಮೀ ಮಳೆಯಾಗಿದೆ. ನಿರಂತರ ಮಳೆಯಿಂದ ಜಿಲ್ಲೆಯ ವಿವಿಧೆಡೆ ಮನೆಯ ಗೋಡೆಗಳು ಕುಸಿಯುತ್ತಿದ್ದು, ಹಳ್ಳಿ ಜನ ಸಂಕಷ್ಟದಲ್ಲಿದ್ದಾರೆ.

ಜಿಲ್ಲೆಯ ಹಳ್ಳ-ಕೊಳ್ಳಗಳಿಗೆ ನೀರು ಹರಿದು ಬರುತ್ತಿವೆ. ಒಟ್ಟು ೧೨೪ ಕೆರೆಗಳು ಇದ್ದು, ಇದರಲ್ಲಿ ಕೆಲವು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಬಸವಕಲ್ಯಾಣ ತಾಲೂಕಿನ ಮುಲ್ಲಾಮಾರಿ ಮೇಲ್ದಂಡೆ ಜಲಾಶಯಕ್ಕೆ ೦.೨೩೭ ಟಿಎಂಸಿ ನೀರು ಬಂದಿದ್ದು, ಇದು ಶೇ.೩೬ರಷ್ಟು ಭರ್ತಿಯಾದರೆ, ಚುಳಕಿನಾಲಾ ಅರ್ಧದಷ್ಟು ತುಂಬಿದೆ. ಕಾರಂಜಾ ಜಲಾಶಯಕ್ಕೆ ನೀರು ಹರಿದುಬರುತ್ತಿದ್ದು, ಶೇ.೬೫ ತುಂಬಿದೆ. ಮಾಂಜ್ರಾ ನದಿಗೂ ಭಾರಿ ನೀರು ಬಂದಿದೆ.

ಬುಧವಾರ ಬೆಳಗ್ಗೆ ೮ರಿಂದ ಗುರುವಾರ ಬೆಳಗ್ಗೆ ೮ರವರೆಗೆ ಜಿಲ್ಲೆಯಲ್ಲಿ ೩೦.೫೦ ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ೫.೮ ಮಿಮೀ ಇತ್ತು. ಶೇ.೪೦೦ ಅಧಿಕ ಮಳೆಯಾಗಿದೆ. ಔರಾದ್ ತಾಲೂಕಿನಲ್ಲಿ ೨೦.೧೭, ಬೀದರ್ ೪೮.೭೨, ಭಾಲ್ಕಿ ೩೨.೦೭, ಬಸವಕಲ್ಯಾಣ ೨೮.೪೦, ಹುಮನಾಬಾದ್ ೩೨.೭೩, ಚಿಟಗುಪ್ಪ ೪೮.೮೦, ಕಮಲನಗರ ೧೨.೮೭ ಹಾಗೂ ಹುಲಸೂರು ತಾಲೂಕಿನಲ್ಲಿ ೧೫.೨೦ ಮಿಮೀ ಮಳೆಯಾಗಿದೆ. ತಾಲೂಕಿನ ಮನ್ನಳ್ಳಿಯಲ್ಲಿ ಅತ್ಯಧಿಕ ೬೮.೨೦ ಮಿಮೀ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಈವರೆಗೆ ವಾಡಿಕೆಯಂತೆ ೧೦೦ ಮಿಮೀ ಮಳೆ ಆಗಬೇಕಿತ್ತು. ಆದರೆ ಸುಮಾರು ೧೮೯ ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.೮೯ ಅಧಿಕವಿದೆ.


ಕಾರಂಜಾ ಶೇ.೬೫ರಷ್ಟು ಭರ್ತಿ
ಕಳೆದ ಕೆಲ ದಿನಗಳಿಂದ ಜಿಲ್ಲೆ ಮತ್ತು ನೆರೆಯ ತೆಲಂಗಾಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾರಂಜಾ ಜಲಾಶಯ ಶೇ.೬೫ರಷ್ಟು ಭರ್ತಿಯಾಗಿದೆ. ನಿರಂತರ ಮುಳೆ ಮುಂದುವರೆದರೆ ಮತ್ತೊಮ್ಮೆ ತುಂಬಲಿದೆ. ೭.೬೯೧ ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ ೪.೯೭೯ ಟಿಎಂಸಿ ನೀರು ಸಂಗ್ರಹವಿದೆ. ಕಳೆದ ನಾಲ್ಕು ದಿನಗಳಿಂದ ಮಳೆ ಬರುತ್ತಿದೆ. ಸದ್ಯಕ್ಕೆ ೪೮೫ ಕ್ಯೂಸೆಕ್ ಒಳ ಹರಿವು ಇದೆ. ೨೦೨೦, ೨೦೨೧, ೨೦೨೨ರಲ್ಲಿ ಸತತ ಮೂರು ವರ್ಷದಿಂದ ಜಲಾಶಯ ಪೂರ್ಣ ಭರ್ತಿಯಾಗಿತ್ತು. ಈಗ ಮತ್ತೆ ಮಳೆ ಅಬ್ಬರದಿಂದ ಜಲಾಶಯಕ್ಕೆ ಕಳೆ ತಂದುಕೊಟ್ಟದೆ. ಕಾರಂಜಾ ಜಲಾಶಯದಿಂದ ಬೀದರ್ ನಗರ, ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ಪಟ್ಟಣ ಹಾಗೂ ಕೆಲ ಹಳ್ಳಿಗಳಿಗೆ ಕುಡಿವ ನೀರು ಸರಬರಾಜು ಆಗುತ್ತದೆ.

ಕೆರೆಯಂತಾದ ಶಾಲೆ ಮೈದಾನ
ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಮನಾಬಾದ್ ತಾಲೂಕಿನ ಸಿಂದಬಂದಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಕೆರೆಯಂತಾಗಿದೆ. ಬುಧವಾರ ರಾತ್ರಿ ಹಾಗೂ ಗುರುವಾರ ಮಳೆ ಸುರಿದ ಪರಿಣಾಮ ಸರ್ಕಾರಿ ಶಾಲೆಯ ಆವರಣ ಹಾಗೂ ಸುತ್ತಮುತ್ತಲು ನೀರು ತುಂಬಿಕೊಂಡಿದೆ. ಬೀದರ್-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶಾಲೆ ಇದೆ. ಎತ್ತರದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಶಾಲೆಯ ಕಟ್ಟಡ ಕೆಳಗಾಗಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲ. ಹೀಗಾಗಿ ಮಳೆಗಾಲದಲ್ಲಿ ಪ್ರತಿ ವರ್ಷ ಈ ಶಾಲೆಗೆ ಇದೇ ಸಮಸ್ಯೆ. ೧ರಿಂದ ೭ನೇ ತರಗತಿಯ ಈ ಶಾಲೆ ನಾಲ್ಕು ದಶಕದ ಹಳೆಯದ್ದು. ಶಾಲೆಯ ಆವರಣದಲ್ಲಿ ನೀರು ತುಂಬಿಕೊಂಡಿದ್ದರಿಂದ ಗುರುವಾರ ರಜೆ ಘೋಷಿಸಲಾಗಿತ್ತು.

ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಪ್ರವಾಹ ಪರಿಸ್ಥಿತಿ ಬಂದರೆ ಸಮರ್ಥವಾಗಿ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಲಾಶಯ, ಕೆರೆಗಳಲ್ಲಿನ ನೀರಿನ ಮಟ್ಟದ ಮೇಲೆ ನಿಗಾ ಇರಿಸಲು, ಸಾಮರ್ಥ್ಯಕ್ಕಿಂತ ಜಾಸ್ತಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು, ಮನೆ ಕುಸಿತ, ಬೆಳೆ ನಷ್ಟ, ಇತರ ಆಸ್ತಿ ಹಾನಿ ಬಗ್ಗೆ ವರದಿ ಸಿದ್ಧಪಡಿಸಲು ನಿರ್ದೇಶನ ನೀಡಲಾಗಿದೆ.
| ಈಶ್ವರ ಖಂಡ್ರೆ
ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net