

ಚಿತ್ರದುರ್ಗ: ಕೋಟೆನಗರಿಯಲ್ಲಿ ವರುಣ ಅಬ್ಬರಿಸಿದ್ದು, ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗಿನ ಜಾವ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಯಿತು. ಹೀಗಾಗಿ ತಗ್ಗು ಪ್ರದೇಶದ ಮನೆ, ಅಂಗಡಿಗಳಿಗೆ ನೀರು ನುಗ್ಗಿದ್ದು, ಪರದಾಡಿದ ಹಲವರು ನೀರನ್ನು ಹೊರಹಾಕಲು ರಾತ್ರಿ ಇಡೀ ಹರಸಾಹಸ ಪಡುವಂತಾಯಿತು.
ರಾತ್ರಿ 1ರ ನಂತರ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. 3ರ ನಂತರ ಜಿಲ್ಲೆಯ ಕೆಲ ಭಾಗಗಳಲ್ಲಿ ವರುಣಾಗಮನವಾಯಿತು. ಚಿತ್ರದುರ್ಗ ನಗರದಲ್ಲೂ ಒಂದು ತಾಸು ಬಿರುಸಿನ ಮಳೆ ಸುರಿಯಿತು.
ಚಿತ್ರದುರ್ಗ ತಾಲೂಕಿನ ಕೆಲವೆಡೆ ಗುಡುಗು-ಮಿಂಚಿನ ಆರ್ಭಟದೊಂದಿಗೆ ಜೋರಾಗಿ ಸುರಿದ ಮಳೆಯಿಂದಾಗಿ ಹೊಲ, ತೋಟಗಳಿಗೂ ನೀರು ನುಗ್ಗಿದೆ.
ನುಗ್ಗಿದ ಕೊಳಚೆ ನೀರು: ಇದ್ದಕ್ಕಿದ್ದಂತೆ ರಭಸವಾಗಿ ಸುರಿದ ಮಳೆಯಿಂದಾಗಿ ಅಗಳೇರಿ, ಬುದ್ಧನಗರ, ರೈಲ್ವೆ ನಿಲ್ದಾಣ ಸೇರಿ 45ಕ್ಕೂ ಹೆಚ್ಚು ಮನೆಗಳಿಗೆ, ಬಿ.ಡಿ.ರಸ್ತೆಯ ಐದಾರು ಅಂಗಡಿಗಳ ಸೆಲ್ಲಾರ್‌ಗಳಿಗೂ ಕೊಳಚೆ ನೀರು ನುಗ್ಗಿತು. ಹೊರಹಾಕಲು ನಾಗರಿಕರು ಹೈರಾಣಾದರು.
ವಾಹನ ಸಂಚಾರ ತಡೆದು ಆಕ್ರೋಶ: ನಗರಸಭೆ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಅಂಗಡಿಗಳಿಗೆ ನೀರು ನುಗ್ಗಿದ್ದು, ನಷ್ಟ ಉಂಟಾಗಿದೆ ಎಂದು ಆರೋಪಿಸಿ ಕೆಲ ವರ್ತಕರು ಬೀದಿಗಿಳಿದು, ವಾಹನಗಳನ್ನು ರಸ್ತೆಗೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.
ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಂಗಡಿಗಳ ಮಾಲೀಕರು, ಇದಕ್ಕೆ ಹೊಣೆ ಯಾರು. ನಷ್ಟ ಭರಿಸುವವರು ಯಾರು ಎಂದು ಪ್ರಶ್ನಿಸಿದರು. ಗಂಟೆಗಟ್ಟಲೇ ಪ್ರತಿಭಟನೆಗೆ ಮುಂದಾದ ಪರಿಣಾಮ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು.
ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಕಿ ನಿರ್ಮಲಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಗಾಲ ಆರಂಭಕ್ಕೂ ಮುನ್ನ ಪ್ರಮುಖ ರಸ್ತೆ ಮಾರ್ಗದ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದೇವೆ. ಇದರಲ್ಲಿ ನಗರಸಭೆಯಿಂದ ಯಾವ ತಪ್ಪು ನಡೆದಿಲ್ಲ ಎಂದು ಚಿತ್ರಗಳ ಸಮೇತ ಮಾಲೀಕರಿಗೆ ಮನವರಿಕೆ ಮಾಡಲು ಮುಂದಾದರು.
ತಗ್ಗು ಪ್ರದೇಶಗಳಲ್ಲಿ ಸೆಲ್ಲಾರ್ ನಿರ್ಮಿಸಿಕೊಳ್ಳದಂತೆ ಹಿಂದೆಯೇ ನಮ್ಮ ಅಧಿಕಾರಿಗಳು ಸಲಹೆ ನೀಡಿದ್ದರು. ಅದನ್ನು ಮೀರಿ ನಿರ್ಮಿಸಿಕೊಂಡಿರುವ ಪರಿಣಾಮ ಮೇಲ್ಭಾಗದ ಕೋಟೆ ರಸ್ತೆಯಿಂದ ಹರಿದು ನೀರು ನುಗ್ಗಿರಬಹುದು ಎಂದು ಕೆಲಕಾಲ ಮಾಲೀಕರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದೇ ವೇಳೆ ರಸ್ತೆ ವಿಭಜಕ ತೆರವುಗೊಳಿಸುವಂತೆಯೂ ಕೆಲವರು ಒತ್ತಾಯಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇನ್ನೂ ಮಳೆ ಅಬ್ಬರಕ್ಕೆ ತುರುವನೂರು ರಸ್ತೆ, ಮೆದೇಹಳ್ಳಿ ರಸ್ತೆ ಒಳಗೊಂಡು ಹಲವೆಡೆಗಳ ಕೆಳ ಸೇತುವೆಗಳ ಬಳಿ ಜಲಾವೃತ ನಿರ್ಮಾಣವಾಯಿತು. ಬೆಳಗಿನ ಜಾವ ಕೆಲವೆಡೆ ವಾಹನ ಸವಾರರು ಸಂಚರಿಸಲು ಪರದಾಡಿದರು. ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಗೆ ಹರಿದ ಪರಿಣಾಮ ದುರ್ವಾಸನೆ ಬೀರಿದ್ದು, ನಾಗರಿಕರಿಗೆ ಕಿರಿಕಿರಿಯೂ ಉಂಟಾಯಿತು.
ಚಿತ್ರದುರ್ಗ ತಾಲೂಕಿನಲ್ಲಿ 53 ಮಿ.ಮೀ ಮಳೆ: ತಾಲೂಕಿನಲ್ಲಿ 53 ಮಿ.ಮೀ ಮಳೆಯಾಗಿದ್ದು, ಇದು ಬುಧವಾರ ಜಿಲ್ಲೆಯಲ್ಲಿ ಸುರಿದ ಅಧಿಕ ಮಳೆಯಾದ ತಾಲೂಕಾಗಿದೆ.
ಚಳ್ಳಕೆರೆ ತಾಲೂಕಿನಲ್ಲಿ 25.6 ಮಿ.ಮೀ, ಹಿರಿಯೂರು-15.4, ಹೊಳಲ್ಕೆರೆ-45.6, ಹೊಸದುರ್ಗ-21.4, ಮೊಳಕಾಲ್ಮೂರು ತಾಲೂಕಿನಲ್ಲಿ 32.3 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ವಿವರ: ಚಳ್ಳಕೆರೆಯಲ್ಲಿ 17.5 ಮಿ.ಮೀ, ನಾಯಕನಹಟ್ಟಿ-36, ಪರಶುರಾಂಪುರ-15.8, ತಳಕು-0.3, ಚಿತ್ರದುರ್ಗ-36.4, ಭರಮಸಾಗರ-24.1, ಹಿರೇಗುಂಟನೂರು-37.9, ತುರುವನೂರು-37.9, ಹಿರಿಯೂರು-12, ಐಮಂಗಲ- 16.2, ಹೊಳಲ್ಕೆರೆ-33.5, ಬಿ.ದುರ್ಗ-40.1, ರಾಮಗಿರಿ-22.3, ತಾಳ್ಯ-27, ಹೊಸದುರ್ಗ-23.1, ಮಾಡದಕೆರೆ-19.5, ಮೊಳಕಾಲ್ಮೂರು-27.7, ದೇವಸಮುದ್ರದಲ್ಲಿ 33.7 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
18 ಮನೆಗಳು ಭಾಗಶಃ ಹಾನಿ: ಮಳೆಯಿಂದಾಗಿ ಚಳ್ಳಕೆರೆ-4, ಚಿತ್ರದುರ್ಗ ತಾಲೂಕಿನ 14 ಸೇರಿ ಒಟ್ಟು 18 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಇನ್ನೂ ಹೊಳಲ್ಕೆರೆ ತಾಲೂಕಿನ 7 ಮನೆಗಳಿಗೂ ನೀರು ನುಗ್ಗಿರುವ ಕುರಿತು ವರದಿಯಾಗಿದೆ.
ಪೌರಕಾರ್ಮಿಕರಿಂದ ಸ್ವಚ್ಛತೆ: ಗುಡುಗು, ಮಿಂಚು, ಸಿಡಿಲು ಸಮೇತ ಧಾರಾಕಾರ ಮಳೆ ಸುರಿದಿದ್ದು, ಕೆಲವೆಡೆ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳ ಮೇಲೆಲ್ಲ ಅನುಪಯುಕ್ತ ತ್ಯಾಜ್ಯದ ರಾಶಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬುಧವಾರ ಬೆಳಗ್ಗೆ ರಸ್ತೆಗಿಳಿದ ಪೌರಕಾರ್ಮಿಕರು ಸ್ವಚ್ಛಗೊಳಿಸುವಷ್ಟರಲ್ಲಿ ಹೈರಾಣಾದರು.