ವರುಣದಿಂದ ಸ್ಪರ್ಧೆಗೆ ಅವಕಾಶ ಕೊಡಿ

Published on

ಮೈಸೂರು: ವರುಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಕ್ರಿಯವಾಗಿಲ್ಲದ ಕಾರಣ ತನಗೆ ಪಕ್ಷದಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂದು ಮುಖಂಡ ಬಿ.ಆರ್.ಗಿರೀಶ್ ಮನವಿ ಮಾಡಿದ್ದಾರೆ.
ಪಕ್ಷ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಅಭಿಷೇಕ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಆದರೆ ಅವರು ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲದ ಕಾರಣ ಪರ್ಯಾಯ ಅಭ್ಯರ್ಥಿ ಹುಡುಕಾಟದಲ್ಲಿ ವರಿಷ್ಠರು ಇದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮ್ಮ ತಾತ ಗುರಿಕಾರ್ ಚೇರ‌್ಮನ್ ಸಿದ್ದಪ್ಪ ಅವರ ಕಾಲದಿಂದಲೂ ನಮ್ಮದು ರಾಜಕೀಯ ಚಟುವಟಿಕೆಯಲ್ಲಿರುವ ಕುಟುಂಬ. ನಾನು ಇಂಜಿನಿಯರಿಂಗ್ ಪದವೀಧರನಾಗಿದ್ದು ಸಮಾಜ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದರು.
2013ರಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದೆ. ಈಗ ಸಿದ್ದರಾಮಯ್ಯ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ಆಗಿದ್ದು, ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿಲ್ಲ. ಆದ್ದರಿಂದ ಜೆಡಿಎಸ್ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು. ಹಾಗಾಗಿ ನನಗೆ ಅವಕಾಶ ಮಾಡಿಕೊಡುವಂತೆ ವರಿಷ್ಠರನ್ನು ಕೋರಿದ್ದೇನೆ ಎಂದರು.
ಬೆಂಬಲಿಗರಾದ ದೇವರಸನಹಳ್ಳಿ ಅನಂತ್, ಕುಮಾರಸ್ವಾಮಿ, ರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net