

ನಂಜನಗೂಡು: ವರುಣ ಕ್ಷೇತ್ರದಲ್ಲಿ ತಾಯಿ ಚಾಮುಂಡೇಶ್ವರಿ ಅಭಿವೃದ್ಧಿಗೆ ದಾರಿ ತೋರಿಸಿದ್ದಾಳೆ. ಯಾರು ಬಟ್ಟೆ ಬಿಚ್ಚಿ ಕುಣಿದರೂ ಸರಿ ಈ ಬಾರಿ ವರುಣ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಕಾರ್ಯ, ಕಾರಾಪುರ, ಹಾಡ್ಯ, ತಗಡೂರು, ಚಿನ್ನಂಬಳ್ಳಿ, ಕೊಂತಯ್ಯನಹುಂಡಿ, ಕಲ್ಕುಂದ, ಕಲ್ಮಳ್ಳಿ, ಬಸವನಪುರ, ನಗರ್ಲೆ, ಸರಗೂರು, ಆಲಂಬೂರು, ಹನಿಯಂಬಳ್ಳಿ, ಸೋನಹಳ್ಳಿ, ಕಿರಗುಂದ, ಮಲ್ಲೂಪುರ ಗ್ರಾಮಗಳಲ್ಲಿ ಬುಧವಾರ ಮತ ಪ್ರಚಾರ ನಡೆಸಿ ಮಾತನಾಡಿದರು.
ದೈವ ಪ್ರೇರಣೆ, ಭಗವಂತನ ಆಶೀರ್ವಾದದಿಂದ ನಮ್ಮ ಪಕ್ಷದ ವರಿಷ್ಠರಾದ ನರೇಂದ್ರಮೋದಿ, ಅಮಿತ್ ಷಾ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ವರುಣ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಎಲ್ಲ ಕೋಮಿನ ಜನರು ಅಭಿವೃದ್ಧಿಗೆ ಮತ ನೀಡಬೇಕೆಂದು ಬಯಸಿ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಈ ಜನರ ಉತ್ಸಾಹವನ್ನು ನೋಡಿದರೆ ನಿಮ್ಮ ಜತೆ ನಾನು ಕುಣಿಯಬೇಕೆಂದು ಅನಿಸುತ್ತಿದೆ. ಇನ್ನು ನಾನು ಈ ಕ್ಷೇತ್ರದಲ್ಲಿ ಶಾಸಕನಾಗಿ ಅಭಿವೃದ್ಧಿಯೊಂದಿಗೆ ನಿಮ್ಮ ಋಣ ತೀರಿಸಿದಲ್ಲಿ ಹೇಗೆ ಪ್ರೀತಿ ತೋರಬಹುದು? ನಿಮ್ಮಲ್ಲರ ಉತ್ಸಾಹ ಕಂಡರೆ ನನಗೆ ಕ್ಷೇತ್ರದಲ್ಲಿ ಯಾರ ನಡುವೆ ಸ್ಪರ್ಧೆ ಎಂಬುದೇ ಗೊತ್ತಿಲ್ಲ ಎಂದರು.
ಬೆಂಗಳೂರಿನಲ್ಲಿ ಸ್ವತಂತ್ರವಾಗಿ ಗೆದ್ದಿದ್ದರೆ ಅದು ವಿ.ಸೋಮಣ್ಣ ಮಾತ್ರ. ಕಳೆದ 45 ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆಯಿಲ್ಲದೆ ನನ್ನದೇ ಆದ ದಾರಿಯಲ್ಲಿ ರಾಜಕಾರಣ ಮಾಡಿದ್ದೇನೆ. ಮಂತ್ರಿಯಾಗಿ ರಾಜ್ಯದಾದ್ಯಂತ ಅಭಿವೃದ್ದಿ ಕೆಲಸಗಳನ್ನು ಮಾಡಿ ಬಡವರ ಸಂಕಷ್ಟಗಳಿಗೆ ನೆರವಾಗಿದ್ದೇನೆ. ತಗಡೂರಿನಲ್ಲಿ 21 ಕೋಮಿನ ಜನರು ಸಹ ಸೌಹಾರ್ದಯುತವಾಗಿ ಸ್ವಾಭಿಮಾನದಿಂದ ವಾಸ ಮಾಡುತ್ತಿರುವುದಕ್ಕೆ ನಿಮ್ಮ ಪಾದ ತೊಳೆದರೂ ಕಡಿಮೆಯೇ. ನಾನು ಸಹ ಬಡವ, ಬಲ್ಲಿದ, ಜಾತಿ ಮತಗಳನ್ನು ನೋಡದೆ ಎಲ್ಲರನ್ನೂ ಸಮಾನವಾಗಿ ನೋಡಿ ನಿಮ್ಮ ಸ್ವಾಭಿಮಾನ, ನಂಬಿಕೆಗೆ ಸಣ್ಣ ಅಪಚಾರವೂ ಮಾಡದಂತೆ ವರುಣ ಕ್ಷೇತ್ರವನ್ನು ಗೋವಿಂದರಾಜನಗರ ಕ್ಷೇತ್ರದಂತೆ ಅಭಿವೃದ್ಧಿಪಡಿಸಿ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ರೂಪಿಸುವೆ ಎಂದರು.
ಮೇ 2 ರಂದು ಅಮಿತ್ ಷಾ ಅವರು ವರುಣ ಕ್ಷೇತ್ರದಲ್ಲಿ ಮತಯಾತ್ರೆ ನಡೆಸಲಿದ್ದಾರೆ. ಮೇ 4 ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಗಡೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಮೇ 6 ರಂದು ಪ್ರಧಾನಿ ನರೇಂದ್ರ ಮೋದಿ ನಂಜನಗೂಡಿಗೆ ಆಗಮಿಸಲಿದ್ದಾರೆ. ಏ.29 ರಂದು ವಿ.ಶ್ರೀನಿವಾಸಪ್ರಸಾದ್ ವರುಣದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಸೋಮಣ್ಣ ತಿಳಿಸಿದರು. ಜಿಪಂ ಮಾಜಿ ಸದಸ್ಯ ಬಿ.ಎನ್.ಸದಾನಂದ, ಮುಖಂಡರಾದ ಕಾ.ಪು.ಸಿದ್ದಲಿಂಗಸ್ವಾಮಿ, ಕಾ.ಪು.ಸಿದ್ದವೀರಪ್ಪ, ಬಿಜೆಪಿ ರಾಜ್ಯ ಮುಖಂಡ ಕೆ.ಕೆ.ಜಯದೇವ್, ಮುಖಂಡರಾದ ಎಲ್.ಆರ್.ಮಹದೇವಸ್ವಾಮಿ, ಜೈಶಂಕರ್, ಗಿರೀಶ್ ಉಪ್ಪಾರ್, ಕುಂಬ್ರಳ್ಳಿ ಸುಬ್ಬಣ್ಣ, ಎನ್.ಎಂ.ಮಹದೇವಸ್ವಾಮಿ, ವೆಂಕಟರಮಣಶೆಟ್ಟಿ, ವರುಣ ಬಿಜೆಪಿ ಅಧ್ಯಕ್ಷ ವಿಜಯ್‌ಕುಮಾರ್, ಬಿಜೆಪಿ ಯುವ ಮೊರ್ಚಾ ರಾಜ್ಯ ಉಪಾಧ್ಯಕ್ಷ ಧೀರಜ್ ಪ್ರಸಾದ್, ತಾಪಂ ಮಾಜಿ ಉಪಾಧ್ಯಕ್ಷ ಸಿ.ಎಂ.ಮಹದೇವಯ್ಯ, ವೆಂಕಟೇಶ್, ಚಿನ್ನಂಬಳ್ಳಿ ಮಂಜುನಾಥ್, ರೇಚಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.