

ವರುಣ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡುವ ಕುರಿತು ಜೆಡಿಎಸ್ ಪಕ್ಷ ಚಿಂತನೆ ನಡೆಸಿದೆ.
ಮೊದಲ ಪಟ್ಟಿಯಲ್ಲೇ ವರುಣ ಕ್ಷೇತ್ರದಿಂದ ಅಭಿಷೇಕ್ ಅವರಿಗೆ ಜೆಡಿಎಸ್ ಟಿಕೆಟ್ ಖಚಿತವಾಗಿದೆ. ಆದರೆ, ಕ್ಷೇತ್ರದಲ್ಲಿ ಸಕ್ರಿಯವಾಗಿ ಮತಪ್ರಚಾರ ಮಾಡುತ್ತಿಲ್ಲ.
ಚುನಾವಣೆಯಿಂದ ಅಂತರ ಕಾಯ್ದುಕೊಳ್ಳುವ ಮೂಲಕ ತಟಸ್ಥರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರವಾಗಿ ಪುತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ನಿತ್ಯ ಮತಪ್ರಚಾರ ನಡೆಸುವ ಮೂಲಕ ಊರೂರು ಸುತ್ತಿದ್ದಾರೆ. ಆದರೆ, ಜೆಡಿಎಸ್ ಅಭ್ಯರ್ಥಿ ಅಭಿಷೇಕ್ ಇನ್ನೂ ಪ್ರಚಾರ ಕಾರ್ಯಕ್ಕೆ ಚಾಲನೆಯನ್ನೇ ನೀಡಿಲ್ಲ. ಅವರು ನಿಷ್ಕ್ರಿಯವಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹಸ್ವಾಮಿ ಅವರು, ಈಗಾಗಲೇ ವಿಷಯ ಎಚ್.ಡಿ.ಕುಮಾರಸ್ವಾಮಿ ಗಮನಕ್ಕೆ ಬಂದಿದೆ. ಮೊದಲ ಪಟ್ಟಿಯೇ ಅಂತಿಮವಲ್ಲ. ಸಕ್ರಿಯರಲ್ಲದವರನ್ನು ಬದಲಾಯಿಸಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಬೇರೆ ಆಕಾಂಕ್ಷಿಗಳು ಸಂಪರ್ಕದಲ್ಲಿದ್ದಾರೆ. ವರುಣದ ಅಭ್ಯರ್ಥಿ ಬದಲಾವಣೆ ಆಗಬಹುದು ಎಂದು ಸುಳಿವು ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಭಿಷೇಕ್ ಪರಾಜಯಗೊಂಡಿದ್ದರು. ಈ ಸಲ ಟಿಕೆಟ್ ಘೋಷಣೆ ಬಳಿಕ ಕೆಲ ದಿನಗಳ ಕಾಲ ಸ್ವಲ್ಪ ಮತಪ್ರಚಾರ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಹೆಸರು ಪ್ರಕಟವಾಗುತ್ತಿದ್ದಂತೆ ನಿಷ್ಕ್ರಿಯವಾಗಿದ್ದಾರೆ. ಪಕ್ಷದ ಮುಖಂಡರ ಸಂಪರ್ಕಕ್ಕೂ ಸಿಕ್ಕಿಲ್ಲ. ಏನು ಸಮಸ್ಯೆಯಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಈ ವಿಷಯವನ್ನು ತಳ್ಳಿಹಾಕಿರುವ ಜೆಡಿಎಸ್ ಅಭ್ಯರ್ಥಿ ಅಭಿಷೇಕ್, ನಾನು ನಿಷ್ಕ್ರಿಯವಾಗಿಲ್ಲ. ಮತಪ್ರಚಾರ ಮಾಡುತ್ತಿರುವೆ. ಆದರೆ, ಉದ್ದೇಶಪೂರ್ವಕವಾಗಿ ನನ್ನ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ