ವರುಣ ಕೋಪಕ್ಕೆ ನಲುಗಿದ ಬೆಳೆ

Tikota 30-1
Published on

ತಿಕೋಟಾ: ಬರದಿಂದ ತತ್ತರಿಸಿದ ರೈತರಿಗೆ ಈಗ ಅತಿವೃಷ್ಟಿ ಬೆಂಬಿಡದೆ ಕಾಡುತ್ತಿದೆ. ಎದೆ ಎತ್ತರಕ್ಕೆ ಬೆಳೆದ ಫಸಲು ನೀರಿನಲ್ಲಿ ನಿಂತಿರುವುದನ್ನು ಕಂಡು ಅನ್ನದಾತರು ವರುಣನಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ತಾಲೂಕಿನ ಯತ್ನಾಳ ಗ್ರಾಮದ ರಾಜು ಬಿರಾದಾರ ಎಂಬುವರ ದ್ರಾಕ್ಷಿ ಬೆಳೆಗಾರನ ತೋಟದಲ್ಲಿ ಮಳೆ ನೀರು ನುಗ್ಗಿದ್ದು, ಸಂಪೂರ್ಣ ಬೆಳೆ ನಾಶವಾಗುತ್ತಿದೆ.
ಮೊಳಕಾಲುದ್ದ ನಿಂತ ನೀರನ್ನು ತೋಟದಿಂದ ಹೊರಹಾಕಲು ರೈತರು ಪಂಪ್‌ಸೆಟ್ ಬಳಸುತ್ತಿದ್ದರೂ ನೀರು ಸರಿಯುತ್ತಿಲ್ಲ. ಸತತ ಮಳೆಯಿಂದ ಸಂಪೂರ್ಣ ಬೆಳೆ ಹಾಳಾಗುತ್ತ್ತಿದೆ ಎಂದವರು ಗೋಳಿಡುತ್ತಿದ್ದಾರೆ.
ಪ್ರತಿವರ್ಷವೂ ದ್ರಾಕ್ಷಿ ಬೆಳೆಗಾರರಿಗೆ ಒಂದಿಲ್ಲೊಂದು ಬಾಧೆ ಪೀಡಿಸುತ್ತಿರುತ್ತದೆ. ಹದಿನೈದು ದಿನಗಳ ಹಿಂದೆ ಮೋಡಕವಿದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ದವಣಿ, ಕರ್ಪಾ, ಜಂತೋಮನ್, ಬುರಿ ರೋಗ ಅಂಟಿಕೊಂಡಿತು. ರೋಗ ನಿಯಂತ್ರಣಕ್ಕೆ ದುಬಾರಿ ಔಷಧ ಸಿಂಪಡಣೆ ಮಾಡಿದರೂ ದ್ರಾಕ್ಷಿ ಪಡೆದ ತಪ್ಪಲು (ಎಲೆಗಳು) ಉದುರಿ ಕೇವಲ ಕಡ್ಡಿ ಮಾತ್ರ ಉಳಿದಿದೆಯಾದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ.
ಈಗ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ನೀರಲ್ಲಿ ನಿಂತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ತೋಟದಿಂದ ಮಳೆನೀರು ಹೊರಹಾಕಲು ಪಂಪ್‌ಸೆಟ್ ಬಳಸಲಾಗುತ್ತಿದೆ. ಈಗ ಚಾಟ್ನಿ ಮಾಡಿದರೂ ಅತಿ ನೀರು ಬಂದು ದ್ರಾಕ್ಷಿ ಹೂ ಬಿಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಕನ್ನೂರ ಗ್ರಾಮದ ರೈತ ರಾಜು ಬಿರಾದಾರ ಹೇಳುತ್ತಾರೆ.
ರಾಜ್ಯದಲ್ಲಿ ಒಟ್ಟು 31,600 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲೇ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಅದರಲ್ಲೂ ತಿಕೋಟಾ ತಾಲೂಕಿನಲ್ಲಿಯ ಅಧಿಕ ದ್ರಾಕ್ಷಿ ಪಡಗಳು ಹಾಳಾಗಿವೆ ಎಂದು ತೋಟಗಾರಿಕೆ ಇಲಾಖೆ ಸರ್ವೇ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net