

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ವರುಣ ಆರ್ಭಟವು ಜೋರಾಗಿದ್ದು, ಅವಾಂತರಗಳನ್ನು ಸೃಷ್ಟಿಸಿದೆ. ಬಹುತೇಕ ಪ್ರದೇಶಗಳು ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಸಾನಿ ಚಂಡಮಾರುತ ಮತ್ತು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದಲೂ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ಸೋಮವಾರ ಸಂಜೆ ಪ್ರಾರಂಭವಾದ ಮಳೆ ಬಿಟ್ಟೂ ಬಿಡದೆ ಮಂಗಳವಾರ ಸಹ ಮುಂದುವರಿದಿದೆ. ಆದರೆ, ಇದು ನಾನಾ ಅನಾಹುತಗಳು, ಆವಾಂತರಗಳಿಗೆ ಕಾರಣವಾಗಿದ್ದು ಜನ ಹೈರಾಣರಾಗಿದ್ದಾರೆ.
ಸರ್ಕಾರಿ ಶಾಲಾ-ಕಾಲೇಜು, ಕಚೇರಿ ಆವರಣ, ಮೈದಾನಗಳು ಜಲಾವೃತಗೊಂಡಿವೆ. ಚರಂಡಿಗಳಲ್ಲಿನ ತ್ಯಾಜ್ಯದೊಂದಿಗೆ ಮಳೆಯ ನೀರು ಮನೆಗಳಿಗೆ ನುಗ್ಗುತ್ತಿರುವುದರಿಂದ ತಗ್ಗು ಪ್ರದೇಶದ ಜನರು ತೊಂದರೆ ಅನುಭವಿಸುವಂತಾಗಿದೆ. ಮತ್ತೊಂದೆಡೆ ತಾಲೂಕಿನ ಚೊಕ್ಕಹಳ್ಳಿ ಕ್ರಾಸ್ ಸಮೀಪದ ತಾತ್ಕಾಲಿಕ ಎಪಿಎಂಸಿ ಹೂವಿನ ಮಾರುಕಟ್ಟೆ ಪ್ರದೇಶದಲ್ಲಿ ಕೆಸರುಗದ್ದೆಯಂತಾಗಿದ್ದು ಬಹುತೇಕ ವಹಿವಾಟು ಸ್ಥಗಿತ, ಉತ್ಪನ್ನಗಳ ನಾಶ ಸೇರಿ ನಾನಾ ಸಮಸ್ಯೆಗಳಿಂದ ಹೂವಿನ ಬೆಳೆಗಾರರು ಮತ್ತು ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ. ಇನ್ನು ಎಂದಿನಂತೆ ನಗರದ ದರ್ಗಾ ಮೊಹಲ್ಲಾ ರಸ್ತೆ ಮತ್ತು ಶಾಂತಿನಗರದಲ್ಲಿ ತ್ಯಾಜ್ಯ ಸಮೇತ ಮಳೆ ನೀರು ನಿಂತುಕೊಂಡಿದ್ದು ರಸ್ತೆಯಲ್ಲಿ ಜನ ಸಂಚರಿಸಲು ಪರದಾಡವಂತಾಗಿತ್ತು. ಸ್ಥಳೀಯ ಆಡಳಿತ ಸಂಸ್ಥೆಯ ಮಳೆಗಾಲದ ಪರಿಹಾರ ಕ್ರಮಗಳನ್ನು ಮೊದಲೇ ಸಮರ್ಪಕವಾಗಿ ಕೈಗೊಳ್ಳದ ಹಿನ್ನೆಲೆಯಲ್ಲಿ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಅಲ್ಲಲ್ಲಿ ಬೆಳೆ ಹಾನಿ:ತಾಲೂಕಿನ ಚೀಡಚಿಕ್ಕನಹಳ್ಳಿಯಲ್ಲಿ ಸೋಮವಾರ ದ್ರಾಕ್ಷಿ ಚಪ್ಪರ ಸಂಪೂರ್ಣವಾಗಿ ಕುಸಿದಿದೆ. ತಾಲೂಕಿನ ವೆಂಕಟರೆಡ್ಡಿ ಎಂಬುವವರ ಒಂದೂವರೆ ಎಕರೆಯಲ್ಲಿದ್ದ ದ್ರಾಕ್ಷಿ ಬೆಳೆ ಒಳ್ಳೆಯ ಫಸಲು ಬಂದಿತ್ತು. ಲಾಭದ ನಿರೀಕ್ಷೆಯಲ್ಲಿದ್ದ ರೈತ ಕುಟುಂಬ ನಷ್ಟಕ್ಕೆ ಕಣ್ಣೀರು ಸುರಿಸುವಂತಾಗಿದೆ. ವಿವಿಧೆಡೆ ಸಾಲ ಪಡೆದುಕೊಂಡು ಬೆಳೆ ಬೆಳೆದಿದ್ದರು. ಆದರೆ, ಇದು ಮಹಾಮಳೆಗೆ ನಾಶವಾಗಿದೆ.
ಕಳೆದ ಭಾನುವಾರ ತಾಲೂಕಿನ ಅರಸನಹಳ್ಳಿಯ ನಂಜೇಗೌಡ ಎಂಬುವವರ ಎರಡೂವರೆ ಎಕರೆಯ ದ್ರಾಕ್ಷಿ ಚಪ್ಪರವು ಬಿದ್ದು ಹೋಗಿ 60 ಟನ್ ಇಳುವರಿ ನಾಶವಾಗಿತ್ತು. ಹೀಗೆ ಅಲ್ಲಲ್ಲಿ ದ್ರಾಕ್ಷಿ ನಾಶವಾಗುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳಿಂದಲೂ ಜಿಲ್ಲೆಯಲ್ಲಿ ಆಗಾಗ ಜೋರು ಗಾಳಿಯ ಜತೆಗೆ ಮಳೆ ಬೀಳುತ್ತಿದೆ. ಇದರಿಂದ ವಿವಿಧ ಬೆಳೆಗಳು ನಾಶವಾಗುತ್ತಿದ್ದು, ಮಾರುಕಟ್ಟೆಯಲ್ಲಿ ದರವೂ ಕುಸಿದಿದೆ.
ನಿರಂತರ ಮಳೆಗೆ ತತ್ತರ:ನಿರಂತರ ಮೋಡ ಮುಸುಕಿದ ವಾತಾವರಣ, ಜಡಿ ಮಳೆಗೆ ಜನರು ಹೊರಗೆ ಬರಲು ಹೆದರುವಂತಾಗಿದೆ. ಚಳಿಗೆ ಬೆಚ್ಚಗೆ ಇರಲು ಟೋಪಿ, ಸ್ವೆಟರ್ ಮೊರೆ ಹೋಗಿದ್ದಾರೆ. ಕಳೆದ ಒಂದು ವಾರದಿಂದಲೂ ಜಿಲ್ಲೆಯಲ್ಲಿ ಹೆಚ್ಚಿಗೆ ಮೋಡ ಮುಸುಕಿದ ವಾತಾವರಣವೇ ಕಂಡು ಬರುತ್ತಿದೆ. ಇನ್ನು ಆಗಾಗ ಸುರಿಯುತ್ತಿರುವ ಮಳೆಗೆ ರಸ್ತೆಬದಿ, ಚರಂಡಿ, ಗುಂಡಿಯ ಜತೆಗೆ ಮನೆಯ ಸುತ್ತಲೂ ಹೆಚ್ಚಿಗೆ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಇದರಿಂದ ಮಲೇರಿಯಾ, ಡೆಂಘೆ, ಚಿಕೂನ್‌ಗುನ್ಯಾ ಸೇರಿ ಸಾಂಕ್ರಾಮಿಕ ಕಾಯಿಲೆಗಳೂ ಹರಡುವ ಭೀತಿ ಮೂಡಿದೆ.
ಕೊಚ್ಚಿ ಹೋದ ರುದ್ರಭೂಮಿ: ಗೌರಿಬಿದನೂರು ತಾಲೂಕಿನಲ್ಲಿ ಸೋಮವಾರ 3 ಗಂಟೆ ಸುರಿದ ಮಳೆಗೆ ಉತ್ತರ ಪಿನಾಕಿನಿ ದಡದ ರುದ್ರಭೂಮಿ ಕೊಚ್ಚಿ ಹೋಗಿದೆ. ಮಳೆಯ ಅಬ್ಬರಕ್ಕೆ ರಸ್ತೆ ಚರಂಡಿಗಳು ಜಲಾವೃತಗೊಳ್ಳುವ ತೆಗೆ ನಗರ ಮಧ್ಯ ಭಾಗದಲ್ಲಿರುವ ವೀರಂಡಹಳ್ಳಿ ಹೊರವಲಯದ ಸ್ಮಶಾನದಲ್ಲಿನ ಸಮಾಧಿಗಳು ಮಣ್ಣು ಸಮೇತ ಕೊಚ್ಚಿ ಹೋಗಿವೆ. ಸುಮಾರು 20ಕ್ಕೂ ಹೆಚ್ಚು ಸಮಾಧಿಗಳು ಇಲ್ಲದಂತಾಗಿವೆ. ಸತ್ತವರ ಸಂಬಂಧಿಕರು ಮಂಗಳವಾರ ಬೆಳಗ್ಗೆ ಸಂಬಂಧಿಗಳ ಸಮಾಧಿ ಎಲ್ಲಿವೆ ಎಂದು ಹುಡುಕಾಡುತ್ತಿರುವ ದೃಶ್ಯ ಕಂಡು ಬಂತು.
ಮನೆಗಳಿಗೆ ನುಗ್ಗಿದ ನೀರು: ಚರಂಡಿ ತುಂಬಿ ಅಂಬೇಡ್ಕರ್ ಬೀದಿಯಲ್ಲಿ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿತ್ತು. ಕೂಡಲೇ ಎಚ್ಚೆತ್ತ ನಗರಸಭೆ ಅಧ್ಯಕ್ಷೆ ರೂಪಾ ಅನಂತರಾಜು, ಸದಸ್ಯರಾದ ರೀದ್, ರಮೇಶ್ ಸ್ಥಳ ಪರಿಶೀಲಿಸಿದರು. ನಗರಸಭೆ ಕಾರ್ಮಿಕರಿಂದ ಚರಂಡಿಗಳನ್ನು ದುರಸ್ತಿ ಮಾಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.
ವೀರಂಡಹಳ್ಳಿ ಸೇರಿ ಆ ಭಾಗದ ಜನಕ್ಕೆ ದಶಕಗಳಿಂದ ಉತ್ತರ ಪಿನಾಕಿನಿ ನದಿಪಾತ್ರದ ದಡ ರುದ್ರಭೂಮಿಯಾಗಿತ್ತು. ಸಂಬಂಧಿಗಳ ಸಮಾಧಿಗಳ ಬಗ್ಗೆ ಜನರಲ್ಲಿ ಭಾವನಾತ್ಮಕ ಸಂಬಂಧವಿರುತ್ತದೆ. ಆದ್ದರಿಂದ ರುದ್ರಭೂಮಿಯ ರಕ್ಷಣೆಗೆ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಅಗತ್ಯ ಕ್ರಮ ಜರುಗಿಸಬೇಕು. ಡಿ.ಜೆ.ಚಂದ್ರಮೋಹನ್, ================= ನಗರಸಭೆ ಸದಸ್ಯಸಾಲದ ಹಣದಲ್ಲಿ ಬಂಡವಾಳ ಹೂಡಿ ದ್ರಾಕ್ಷಿ ಬೆಳೆಯಲಾಗಿತ್ತು. ಇದೀಗ ಬೆಳೆ ಸಂಪೂರ್ಣ ನಾಶವಾಗಿ ನಷ್ಟ ಉಂಟಾಗಿದೆ. ಆರ್ಥಿಕ ಸಂಕಷ್ಟದ ಭೀತಿ ಕಾಡುತ್ತಿದೆ. ಸರ್ಕಾರ ಪ್ರಾಕೃತಿಕ ವಿಕೋಪದಡಿ ಸೂಕ್ತ ಪರಿಹಾರ ನೀಡಬೇಕು. ವೆಂಕಟರೆಡ್ಡಿ, ರೈತ