ವರಿಷ್ಠರು ಒಪ್ಪಿದ್ರೆ ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆ

CM
Published on

ಕಲಬುರಗಿ: ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನರಾರಚನೆ ಜತೆಗೆ ರಾಜ್ಯವನ್ನು ಬೆಂಬಿಡದೆ ಕಾಡುತ್ತಿರುವ ಅತಿವೃಷ್ಟಿ ಹಾನಿಗೆ ಪರಿಹಾರ ಸೇರಿ ಕೆಲ ವಿಷಯಗಳ ಪ್ರಸ್ತಾವನೆ ಹೊತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಕಲಬುರಗಿಯಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.
ಕಲ್ಯಾಣ ಕನರ್ಾಟಕ ಉತ್ಸವದಲ್ಲಿ ಖುಷಿಯಿಂದಲೇ ಪಾಲ್ಗೊಂಡ ಅವರು, ಕರೊನಾ ಹಾವಳಿಯಲ್ಲಿ ಇದೇ ಮೊದಲ ಸಲ ಹಲವು ಸಮಸ್ಯೆಗಳನ್ನು ಹೊತ್ತು ದೆಹಲಿಗೆ ತೆರಳಿ ಹೈಕಮಾಂಡ್ ಕದ ತಟ್ಟಲಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ನಗರದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವುದರ ಜತೆಗೆ ಸುಮಾರು 1300 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳುವ ಮುನ್ನ ಏರ್ಪೋಟ್ನಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಅಧಿವೇಶನಕ್ಕೂ ಮುನ್ನ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಅಪೇಕ್ಷೆ ನನ್ನದು. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇತರರನ್ನು ಭೇಟಿ ಮಾಡಿ ಸಲಹೆ ಮತ್ತು ಅಭಿಪ್ರಾಯ ಪಡೆಯುವೆ. ಅವರ ಒಪ್ಪಿಗೆ ಮೇಲೆ ಎಲ್ಲವೂ ಅವಲಂಬಿಸಿದೆ. ಸರ್ಕಾರ ರಚನೆಗೆ ಕಾರಣರಾದವರಿಗೆ ಅವಕಾಶ ಕಲ್ಪಿಸುವ ಸುಳಿವು ನೀಡಿದ ಅವರು, ಕಲಬುರಗಿ ಜಿಲ್ಲೆಗೂ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಬೇಡಿಕೆ ಬಗ್ಗೆ ಪರಿಶೀಲಿಸುವೆ ಎಂದರು.
ಪ್ರಧಾನಿ ಮೋದಿ, ನಿತೀನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಸೇರಿ ಕೇಂದ್ರದ ಹಲವು ಸಚಿವರು ಸಮಯ ನೀಡಿದ್ದಾರೆ. ಶುಕ್ರವಾರ ಮತ್ತು ಶನಿವಾರ ದೆಹಲಿಯಲ್ಲೇ ಇದ್ದು, ಎಲ್ಲರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ, ಕೃಷಿ ಸೇರಿ ಹಲವು ಯೋಜನೆಗಳ ಕುರಿತು ಚರ್ಚೆ ನಡೆಸುವೆ. 19ರಂದು ಬೆಂಗಳೂರಿಗೆ ಮರಳುವುದಾಗಿ ಬಿಎಸ್ವೈ ತಿಳಿಸಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಾಂಸ್ಕೃತಿಕ ಸಂಘಕ್ಕೆ ಘೋಷಿಸಿರುವ ಅನುದಾನದಲ್ಲಿ ಈಗಾಗಲೇ 100 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಇನ್ನೂ 300 ಕೋಟಿ ರೂ. ಕೊಡಲಾಗುವುದು. ಕೆಕೆಆರ್ಡಿಬಿಗೂ ಹೆಚ್ಚಿನ ಅನುದಾನ ಕೊಡುವ ಮೂಲಕ ಈ ಭಾಗದ ಚಿತ್ರಣ ಬದಲಾಯಿಸಲು ಮತ್ತು ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಡಿಸಿಎಂ ಗೋವಿಂದ ಕಾರಜೋಳ, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಎನ್ಇಕೆಆರ್ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ, ಶಾಸಕರಾದ ಬಿ.ಜಿ. ಪಾಟೀಲ್, ಬಸವರಾಜ ಮತ್ತಿಮೂಡ, ಸಂಸದ ಡಾ.ಉಮೇಶ ಜಾಧವ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶಶೀಲ್ ನಮೋಶಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ. ಯುವ ಮುಖಂಡ ಚಂದು ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net