ವರಿಷ್ಠರ ಸಂದೇಶ ಪಾಲಿಸಿ

13blrp3
Published on


ಹಾಸನ : ಪಕ್ಷ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವರಿಗೆ ನಿರಾಸೆಯಾಗಿರಬಹುದು. ಆದರೆ ವರಿಷ್ಠರು ನೀಡಿದ ಸಂದೇಶವನ್ನು ಪ್ರತಿ ಆಕಾಂಕ್ಷಿಗಳು ಪಾಲಿಸಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಸಲಹೆ ನೀಡಿದರು.


ಬುಧವಾರ ಬೇಲೂರು ಪಟ್ಟಣದ ನೆಹರುನಗರದ ಮೂಲಕ ಚಿಕ್ಕಮಗಳೂರಿಗೆ ತೆರಳುವಾಗ ಬೇಲೂರು ಕ್ಷೇತ್ರದ ಅಭ್ಯರ್ಥಿ ಎಚ್.ಕೆ.ಸುರೇಶ್ ಮತ್ತು ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.


ಈಗಾಗಲೇ ಹಲವು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲೆ ನಮ್ಮ ಪಾಲಿಗೆ ಭದ್ರಕೋಟೆಯಾಗಬೇಕು ಎಂಬ ಕಾರಣದಿಂದ ಆಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಬೇಲೂರು ಕ್ಷೇತ್ರಕ್ಕೆ ಎಚ್.ಕೆ.ಸುರೇಶ್ ಹೆಸರು ಅಂತಿಮವಾಗಿದೆ. ಅವರು ಜಿಲ್ಲಾಧ್ಯಕ್ಷರಾಗಿ ಐದು ವರ್ಷದಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಆದರೆ ಉಳಿದ ಆಕಾಂಕ್ಷಿಗಳನ್ನು ಜತೆಗೆ ಕರೆದು ಅವರೊಂದಿಗೆ ಕೆಲಸ ಮಾಡುವ ಮೂಲಕ ಬೇಲೂರಿನಲ್ಲಿ ಗೆಲುವಿಗೆ ಎಚ್.ಕೆ.ಸುರೇಶ್ ಮುಂದಾಗಬೇಕು ಎಂದು ಸಲಹೆ ನೀಡಿದರು.


ಎಚ್.ಕೆ.ಸುರೇಶ್ ಮಾತನಾಡಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷದ ಗೆಲುವು ಮುಖ್ಯ. ಪಕ್ಷದ ಎಲ್ಲ ಮುಖಂಡರು, ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಏ.17 ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು.


ಬಿಜೆಪಿ ತಾಲೂಕು ಅಧ್ಯಕ್ಷ ಆನಂದ್, ಚುನಾವಣಾ ಸಮಿತಿ ಜಿಲ್ಲಾ ಸಂಚಾಲಕ ರೇಣುಕುಮಾರ್, ಮುಖಂಡರಾದ ಜಿ.ಕೆ.ಕುಮಾರ್, ಮಂಜುನಾಥ್, ರಮೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net