ವರಿಷ್ಠರ ನಿರ್ದೇಶನ ಪಾಲಿಸುವೆ -ಜಗದೀಶ ಶೆಟ್ಟರ್ ಹೇಳಿಕೆ

DVG-JAGADESH-SHETTAR-28.jpg
Published on

ದಾವಣಗೆರೆ: ಬೇಷರತ್ತಾಗಿ ಬಿಜೆಪಿ ಸೇರ್ಪಡೆಯಾಗಿದ್ದು ಲೋಕಸಭಾ ಚುನಾವಣೆ ಸ್ಪರ್ಧೆ ಸೇರಿ ಯಾವುದೇ ಜವಾಬ್ದಾರಿ ಕುರಿತು ಕೇಂದ್ರ ವರಿಷ್ಠರು ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಐದಾರು ತಿಂಗಳಿನಿಂದ ಬಿಜೆಪಿ ಕಾರ್ಯಕರ್ತರು, ನಾಯಕರಿಂದ ಪಕ್ಷ ಸೇರ್ಪಡೆಗೆ ಒತ್ತಡವಿತ್ತು. ಕೇಂದ್ರ ವರಿಷ್ಠರು ಸಹ ಆಹ್ವಾನ ನೀಡಿದ್ದರಿಂದ ಪಕ್ಷಕ್ಕೆ ಮರಳಿದ್ದೇನೆ ಎಂದು ತಿಳಿಸಿದರು.

ಹತ್ತು ವರ್ಷಗಳ ಕಾಲ ಉತ್ತಮ ಆಡಳಿತದೊಂದಿಗೆ ರಾಷ್ಟ್ರದ ಉನ್ನತಿಗೆ ಶ್ರಮಿಸಿರುವ ನರೇಂದ್ರ ಮೋದಿ ಅವರು ಮೂರನೇ ಬಾರಿಯೂ ಪ್ರಧಾನಮಂತ್ರಿ ಆಗಬೇಕು. ಕಾರ್ಯಕರ್ತರೆಲ್ಲ ಕೈಜೋಡಿಸಿ ಕೆಲಸ ಮಾಡಬೇಕು. ಪಕ್ಷ ಬಲಪಡಿಸುವ ಜತೆಗೆ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಶಾಸಕ ಲಕ್ಷ್ಮಣ್ ಸವದಿ ಬಿಜೆಪಿಗೆ ಬರುತ್ತಾರಾ? ಎಂಬ ಪ್ರಶ್ನೆಗೆ, ಅವರು ನಮ್ಮ ಸಂಪರ್ಕದಲ್ಲಿಲ್ಲ ಎಂದ ಅವರು, ಸಂಸದ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಗೆಲುವು ಸಾಧಿಸಲಿ ಎಂದು ಶಾಮನೂರು ಶಿವಶಂಕರಪ್ಪ ಅವರು ನೀಡಿರುವ ಹೇಳಿಕೆ ಒಳ್ಳೆಯದೇ ಆಯ್ತಲ್ಲ ಎಂದು ಪ್ರತಿಕ್ರಿಯಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿ.ಜಿ.ಅಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net