ವರಮಹಾಲಕ್ಷ್ಮೀ ಹಬ್ಬಕ್ಕೆ ಸಕಲ ಸಿದ್ಧತೆ

8
Published on

ಮೈಸೂರು: ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮೀ ಆಚರಣೆಗಾಗಿ ನಗರದಲ್ಲಿ ಗುರುವಾರ ಸಿದ್ಧತೆ ನಡೆಯಿತು.


ಆ. 25ರಂದು ಶ್ರದ್ಧಾಭಕ್ತಿಯಿಂದ ಹಿಂದುಗಳ ಮನೆಯಲ್ಲಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಇದು ಹೆಂಗಳೆಯರ ಪ್ರಮುಖ ಹಬ್ಬ. ಹೀಗಾಗಿ, ಮಹಿಳೆಯರು ನಗರದ ಪ್ರಮುಖ ದೇವರಾಜ ಮಾರುಕಟ್ಟೆ, ಧನ್ವಂತ್ರಿ ರಸ್ತೆ, ಜೆ.ಕೆ.ಮೈದಾನ, ನಂಜುಮಳಿಗೆ ವೃತ್ತ, ಅಗ್ರಹಾರ ಮತ್ತು ವಾಣಿವಿಲಾಸ ಮಾರುಕಟ್ಟೆಗೆ ಭೇಟಿ ನೀಡಿ ಹಬ್ಬಕ್ಕೆ ಬೇಕಾದ ಪದಾರ್ಥಗಳು, ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ಇದರಿಂದಾಗಿ ದೇವರಾಜ ಮಾರುಕಟ್ಟೆ ಸುತ್ತಮುತ್ತಲ ರಸ್ತೆಗಳಲ್ಲಿ ಜನ-ವಾಹನ ದಟ್ಟಣೆ ಹೆಚ್ಚಾಗಿತ್ತು.


ಹಬ್ಬದ ಅಂಗವಾಗಿ ಹೂವಿಗೆ ಅಧಿಕ ಬೇಡಿಕೆ ಸೃಷ್ಟಿಯಾಗಿದೆ. ಬೇರೆ ದಿನಗಳಿಗೆ ಹೋಲಿಸಿದರೆ ದರ ದುಬಾರಿ ಆಗಿದೆ. ಲಕ್ಷ್ಮೀ ಪೂಜೆಗೆ ಬಳಸುವ ಹೂವುಗಳ ಬೆಲೆ ದುಪ್ಪಟ್ಟಾಗಿದ್ದು, ಹಬ್ಬದ ದಿನದಂದು ಮುತ್ತೈದೆಯರಿಗೆ ಅರಿಶಿಣ ಕುಂಕುಮದೊಂದಿಗೆ ನೀಡುವ ರವಿಕೆ ಬಟ್ಟೆ ಕೊಳ್ಳುವುದರಲ್ಲಿ ಮಹಿಳೆಯರು ಜವಳಿ ಮಳಿಗೆಗಳಲ್ಲಿ ನಿರತರಾಗಿದ್ದರು.

ಹಬ್ಬಕ್ಕೆ ಪ್ರಮುಖವಾಗಿ ಬೇಕಾಗಿರುವ ಲಕ್ಷ್ಮೀ ಮುಖವಾಡ ಖರೀದಿ ಭರಾಟೆ ಜೋರಾಗಿತ್ತು. ತಮ್ಮ ಆರ್ಥಿಕ ಶಕ್ತಿಗೆ ಅನುಸಾರ ಚಿನ್ನ, ಬೆಳ್ಳಿ ಇತರ ಲೋಹದ ಲಕ್ಷ್ಮೀ ಮುಖವಾಡ ಖರೀದಿಸಿದರು. ಬಳೆ ಖರೀದಿಗೂ ಮುಗಿಬಿದ್ದಿದ್ದರು. ಇದರಿಂದಾಗಿ ಬಳೆ ಅಂಗಡಿಗಳು ಮಹಿಳೆಯರಿಂದಲೇ ತುಂಬಿದ್ದವು.
ಹಬ್ಬಕ್ಕೆ ಹೆಚ್ಚಾಗಿ ಬಳಕೆಯಾಗುವ ವೀಳ್ಯದೆಲೆ, ಹೂವು, ನಿಂಬೆಹಣ್ಣು, ವಿವಿಧ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಅದರಂತೆ ಪ್ರತಿ ಕೆಜಿ ಸೇವಂತಿಗೆ 100-120 ರೂ., ಕನಕಾಂಬರ 2000 ರೂ., ಮಲ್ಲಿಗೆ 1200 ರೂ., ಗುಲಾಬಿ 400 ರೂ. ದರ ನಿಗದಿಪಡಿಸಲಾಗಿತ್ತು. ಕಾಕಡ, ತಾವರೆ ಹೂವಿನ ಬೆಲೆಯೂ ಏರಿಕೆಯಾಗಿದೆ.

ಹಬ್ಬಕ್ಕೆ ಹೆಚ್ಚು ಬಳಸುವ ತಾವರೆ ಹೂವು 20ರಿಂದ 40 ರೂ.ಆಗಿದೆ. ನಿಂಬೆಹಣ್ಣಿನ ಗಾತ್ರಕ್ಕೆ ತಕ್ಕಂತೆ 5ರಿಂದ 10 ರೂ. ವರೆಗೂ ಮಾರಾಟ ಮಾಡಲಾಯಿತು. ವೀಳ್ಯದೆಲೆ ಗುಣಮಟ್ಟಕ್ಕೆ ತಕ್ಕಂತೆ ಒಂದು ಕಟ್ಟಿಗೆ 80ರಿಂದ 180 ರೂ. ವರೆಗೂ ದರ ನಿಗದಿಪಡಿಸಲಾಗಿತ್ತು.

ಹಣ್ಣುಗಳ ಬೆಲೆಯಲ್ಲೂ 10ರಿಂದ 20 ರೂ. ಏರಿಕೆಯಾಗಿದೆ. ದಾಳಿಂಬೆ, ಸೇಬು, ಬಾಳೆಹಣ್ಣು, ಮೂಸಂಬಿ, ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳ ಬೆಲೆಯೂ ದುಬಾರಿಯಾಗಿದೆ. ಪೂಜೆಯಂದು ದೇವಿಯ ಮುಂದೆ 9 ತಟ್ಟೆಗಳಲ್ಲಿ ಹಣ್ಣುಗಳನ್ನು ಇಡಬೇಕಿರುವುದರಿಂದ ಜನರು ಹಣ್ಣುಗಳ ಖರೀದಿಗೆ ಮುಗಿಬಿದ್ದರು.

ಪ್ರತಿ ಕೆಜಿ ಬಾಳೆಹಣ್ಣಿಗೆ 90-100 ರೂ., ಸೇಬಿಗೆ 150-220 ರೂ, ಮೂಸಂಬಿಗೆ 100 ರೂ, ಕಿತ್ತಳೆಗೆ 140 ರೂ., ದಾಳಿಂಬೆಗೆ 160-200 ರೂ., ಮರಸೇಬಿಗೆ 180 ರೂ., ಸೀತಾಫಲಕ್ಕೆ 80 ರೂ., ಅನಾನಸ್‌ಗೆ 50 ರೂ. ದರ ಇತ್ತು. ತರಕಾರಿ ಬೆಲೆಯೂ ಕೊಂಚ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net