ವರದಿ ಸಿಗದೆ ‘ಕೈ’ಗಿಲ್ಲ ಕೋಳ

24RAjesh2
Published on

ಚಾಮರಾಜನಗರ: ಐದು ಹುಲಿಗಳ ಸಾವಿನ ಬೆನ್ನಲ್ಲೇ ಜೋರು ಸದ್ದು ಮಾಡಿದ್ದ ಚಿರತೆ ಮೃತ್ಯು ಮತ್ತು ಕೋತಿಗಳ ಮಾರಣಹೋಮ ಪ್ರಕರಣದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬರುವವರೆಗೂ ಆರೋಪಿಗಳ ಬಂಧನವಾಗದು.

ಕಳೆದ ತಿಂಗಳು ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳು ಮೃತಪಟ್ಟವು. ಇದರ ಬೆನ್ನಲ್ಲೇ ಇದೇ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ಉಪ ವಿಭಾಗದ ರಾಮಾಪುರ ವನ್ಯಜೀವಿ ವಲಯ(ಕೌದಳ್ಳಿ ಕಚೇರಿ) ಅರಣ್ಯ ಪ್ರದೇಶದಲ್ಲಿ ಚಿರತೆ ಮೃತಪಟ್ಟಿತ್ತು. ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ- ಕೊಡಸೋಗೆ ಗ್ರಾಮದ ರಸ್ತೆಯಲ್ಲಿ ನಡೆದಿದ್ದ ಕೋತಿಗಳ ಮಾರಣ ಹೋಮ ನಡೆದಿತ್ತು. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿಯಲ್ಲಿ ಅನುಮಾನಾಸ್ಪದವಾಗಿ ಚಿರತೆ ಮೃತಪಟ್ಟಿತ್ತು. ಕೊತ್ತಲವಾಡಿಯ ಚಿರತೆ ಮತ್ತು ಕಂದೇಗಾಲದ ಕೋತಿಗಳ ಸಾವಿನ ಹಿಂದಿನ ಸತ್ಯ ತಿಳಿಯಲು ಪ್ರಾಣಿಗಳ ಮೃತದೇಹದ ಅಂಗಾಂಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿಂದ ವರದಿ ಬಂದ ಬಳಿಕ ವಿಷ ಪ್ರಾಶನ ಮಾಡಿರುವುದು ಖಚಿತವಾಗಲಿದೆ. ಬಳಿಕವಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಆರೋಪಿಗಳ ಸೆರೆಯಾಗಲಿದೆ. ಹುಲಿಗಳ ಸಾವಿನ ವರದಿಯನ್ನು ಹೈದರಾಬಾದ್‌ಗೆ ಕಳುಹಿಸಲಾಗಿತ್ತು. ಅಲ್ಲಿಂದ ಬೇಗ ವರದಿ ಬಂದಿತ್ತು. ಚಿರತೆ ಮತ್ತು ಕೋತಿಗಳ ಸಾವಿನ ವರದಿಯನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿಂದ ವರದಿ ಪಡೆಯಲು ಕನಿಷ್ಟ 15 ದಿನಗಳವರೆಗೆ ಕಾಯಬೇಕಾಗುತ್ತದೆ ಎಂದು ತಿಳಿದುಬಂದಿದೆ.

ತನಿಖೆ ಪ್ರಗತಿಯಲ್ಲಿದೆ:

ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಚಿರತೆಯ ಸಾವಿನ ವರದಿಯನ್ನು ಅರಣ್ಯ ಇಲಾಖೆ ಕಾಯುತ್ತಿದೆ. ವರದಿಯಲ್ಲಿ ಸಾವಿಗೆ ನಿಖರ ಕಾರಣ ಮತ್ತು ವಿಷ ಪ್ರಾಶನವಾಗಿರುವುದು ಖಚಿತವಾದ ಬಳಿಕವಷ್ಟೇ ಮುಂದಿನ ತನಿಖೆ ನಡೆಸಲು ಸಾಧ್ಯ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.

ಆದರೂ ಈ ಪ್ರಕರಣದಲ್ಲಿ ಶಂಕೆ ಇರುವ ವ್ಯಕ್ತಿಯೊಬ್ಬನ ಮೇಲೆ ನಿಗಾವಹಿಸಲಾಗಿದೆ. ಈತ ಸದ್ಯಕ್ಕೆ ಊರು ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ಇನ್ನು ರಾಮಾಪುರ ಅರಣ್ಯ ಪ್ರದೇಶದ ಚಿರತೆ ಸಾವಿನ ಪ್ರಕರಣದ ತನಿಖೆಯೂ ನಡೆಯುತ್ತಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ತನಿಖೆ ನಡೆಸಿ ವರದಿ ನೀಡಲಾಗಿದೆ. ವರದಿಯಲ್ಲಿ ಸತ್ತ ಚಿರತೆಯ ಮುಂಗಾಲು ಕತ್ತರಿಸಿರುವುದಾಗಿ ತಿಳಿದುಬಂದಿದೆ. ಈ ಕೃತ್ಯವೆಸಗಿರುವ ಆರೋಪಿಗಳು ಇನ್ನೂ ಸೆರೆ ಸಿಕ್ಕಿಲ್ಲ.

ಗುಂಡ್ಲುಪೇಟೆಯ ಕಂದೇಗಾಲ ಬಳಿ ನಡೆದಿದ್ದ ಕೋತಿಗಳ ಮಾರಣ ಹೋಮ ಅಮಾನವೀಯತೆಯ ಕರಾಳ ಮುಖವಾಡವನ್ನು ಬಿಚ್ಚಿಟ್ಟಿತ್ತು. ಮೇಲ್ನೊಟಕ್ಕೆ ಕೋತಿಗಳಿಗೆ ವಿಷ ಹಾಕಲಾಗಿದೆ. ಸಾಯದೆ ಇದ್ದ ಕೋತಿಗಳ ತಲೆಯ ಮೇಲೆ ಹೊಡೆದು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ವರದಿಯೂ ಪ್ರಯೋಗಾಲಯದಿಂದ ಬರಬೇಕಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಮುಂದುವರೆಸಲು ವರದಿಯನ್ನು ಕಾಯುತ್ತಿದ್ದಾರೆ.

ಹುಲಿ ಸಾವಿನ ಪ್ರಕರಣದ ಆರೋಪಿಗಳು..: ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳಿಗೆ ವಿಷ ಹಾಕಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳಾದ ಮಾದುರಾಜು, ನಾಗರಾಜು, ಕೋನಪ್ಪ ಇದೇ ತಿಂಗಳು ಕೊಳ್ಳೇಗಾಲದ ಕೋರ್ಟ್‌ಗೆ ವಿಚಾರಣೆ ಹಾಜರಾಗಲಿದ್ದಾರೆ. ಈ ಕುರಿತು ಆರೋಪಿಗಳ ಪರ ವಕೀಲ ಎಂ.ಮಹದೇವಪ್ರಸಾದ್(ಎಂ.ಎಂ.ಪಿ) ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಜು.26ರಂದು ಕೋರ್ಟ್ ಹಾಜರಾಗಲು ಘನ ನ್ಯಾಯಾಲಯ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.

ರಾಮಾಪುರ ಅರಣ್ಯದಲ್ಲಿ ಮೃತಪಟ್ಟಿದ್ದ ಚಿರತೆ ಪ್ರಕರಣದ ತನಿಖೆ ನಡೆಯುತ್ತಿದೆ. ಸಿಡಿಆರ್ ಮತ್ತು ಇತರೆ ಮಾಹಿತಿಗಳನ್ನು ಕಲೆ ಹಾಕಾಗುತ್ತಿದೆ. ಹೀರಾಲಾಲ್, ಸಿಸಿಎ್, ಚಾಮರಾಜನಗರ ವೃತ್ತ ಕೊತ್ತಲವಾಡಿಯ ಕರಿಕಲ್ಲು ಕ್ವಾರಿಯಲ್ಲಿ ಸತ್ತಿದ್ದ ಚಿರತೆಯ ಎ್ಎಸ್‌ಎಲ್ ವರದಿಯನ್ನು ಕಾಯುತ್ತಿದ್ದೇವೆ. ಈ ಪ್ರಕರಣದ ತನಿಖೆಯನ್ನು ಮಾಡಿದ್ದೇವೆ. ಎ್ಎಸ್‌ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಶ್ರೀಪತಿ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ, ಚಾಮರಾಜನಗರ ಬೇರೆ ಕಡೆ ಕೋತಿಗಳನ್ನು ಸಾಯಿಸಿ ಕಂದೇಗಾಲದ ಬಳಿ ತಂದು ಎಸೆದು ಹೋಗಿದ್ದಾರೆ. ಯಾರೆಂಬುದು ಇನ್ನೂ ಗೊತ್ತಾಗಿಲ್ಲ. ಕೋತಿಗಳ ಮರಣದ ತನಿಖೆಗಾಗಿ ಎ್ಎಸ್‌ಎಲ್ ವರದಿಗೆ ಕಳುಹಿಸಿ ಕಾಯಲಾಗುತ್ತಿದೆ. ನವೀನ್‌ಕುಮಾರ್, ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net