ವರದಿ ಬಂದ ಮೇಲೆ ತನಿಖೆ ಆರಂಭ

cm siddaramayya
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸಂಪುಟ ಉಪ ಸಮಿತಿ ವರದಿ ನೀಡಿದ ಮೇಲೆ ಕೋವಿಡ್ ಹಗರಣದ ಕುರಿತು ತನಿಖೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವೇಳೆ ಪಿಪಿಐ ಕಿಟ್ ಹಾಗೂ ಇನ್ನಿತರ ವೈದ್ಯಕೀಯ ಅವಶ್ಯಕತೆಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ವರದಿ ನೀಡಿ ಕ್ರಮಕ್ಕೆ ಸೂಚಿಸಿದ್ದರು. ಈ ವರದಿಯ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಂಪುಟ ಉಪ ಸಮಿತಿ ಪರಿಶೀಲಿಸುತ್ತಿದೆ. ಸಂಪುಟ ಉಪ ಸಮಿತಿ ವರದಿ ನೀಡಿದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ಹಗರಣದ ತನಿಖೆ ನಡೆಸುವ ಕಾಂಗ್ರೆಸ್​ನ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲವೆಂಬ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ರಚನೆಯಾದ ಆಯೋಗದ ವರದಿ ಪ್ರಕಾರ ಕ್ರಮಕ್ಕೆ ಮುಂದಾಗಿದ್ದೇವೆ. ಗೊಡ್ಡು ಬೆದರಿಕೆ ಅಂದ್ರೆ ಏನು ? ಲೂಟಿ ಹೊಡೆದು ಗೊಡ್ಡು ಬೆದರಿಕೆ ಎಂದು ಹೇಳುವುದಾ ಎಂದು ಪ್ರಶ್ನಿಸಿದರು.

ರಾಜ್ಯದ ಅಬಕಾರಿ ಹಗರಣದ ಅಕ್ರಮ ಹಣವನ್ನು ಮಹಾರಾಷ್ಟ್ರ ಚುನಾವಣೆಗೆ ಕಾಂಗ್ರೆಸ್ ಬಳಕೆ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅವರು ಈ ರೀತಿ ಸುಳ್ಳು ಹೇಳುವುದು ಪ್ರಧಾನಿ ಸ್ಥಾನಕ್ಕೆ ಅಗೌರವ ತೋರಿದಂತೆ. ಯಾರಾದರೂ ಮದ್ಯದಂಗಡಿ ಲೈಸೆನ್ಸ್ ನೀಡುವಲ್ಲಿ 700 ಕೋಟಿ ರೂ. ಹಣ ಮಾಡಲು ಆಗುತ್ತದೆಯಾ? ಸುಳ್ಳು ಹೇಳಲು ಇತಿಮಿತಿ ಇರಬೇಕು. ಬಿಜೆಪಿಯವರು ರಾಜಕೀಯಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.

ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಲು ಬಿಜೆಪಿ ಹೈಕಮಾಂಡ್​ಗೆ 2000 ಕೋಟಿ ರೂ. ಕೊಟ್ಟಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ ಅವರೇ ಹೇಳಿದ್ದರು. ಈ ಹಣ ಎಲ್ಲಿಂದ ಬಂದಿದ್ದು? 17 ಶಾಸಕರನ್ನು ಖರೀದಿ ಮಾಡುವಾಗ ಬಿಜೆಪಿಗೆ ಹಣ ಎಲ್ಲಿಂದ ಬಂದಿತ್ತು ? ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net