

ಹುಬ್ಬಳ್ಳಿ: ಧಾರವಾಡದ ಕುಂಬಾರ ಓಣಿ ಮೂಲದ ಮಹಿಳೆಗೆ, ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ಮಾಡಿರುವ ಕುರಿತು ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಹಾವೇರಿ ಜಿಲ್ಲೆ ಹಾನಗಲ್ಲ ಯುವಕನೊಂದಿಗೆ 2018ರಲ್ಲಿ ಧಾರವಾಡದ ಯುವತಿಯ ಮದುವೆಯಾಗಿತ್ತು. 180 ಗ್ರಾಂ ಚಿನ್ನ, 1 ಲಕ್ಷ ರೂ. ನಗದು, 8 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ವರದಕ್ಷಿಣೆ ರೂಪದಲ್ಲಿ ಕೊಡಲಾಗಿತ್ತು. ನೂತನ ದಂಪತಿ 6 ತಿಂಗಳವರೆಗೆ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ.
ಕ್ರಮೇಣ ಪತಿ ಹಾಗೂ ಮನೆಯವರು 1.50 ಲಕ್ಷ ರೂ. ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಗೂಡ್ಸ್ ಚಾಲಕನ ಸುಲಿಗೆ
ಹುಬ್ಬಳ್ಳಿ: ಗೂಡ್ಸ್ ವಾಹನ ಬಾಡಿಗೆಗೆ ಬೇಕಾಗಿದೆ ಎಂದು ಸುಳ್ಳು ಹೇಳಿ ಚಾಲಕನನ್ನು ಕರೆದುಕೊಂಡು ಹೋಗಿ ಆತನನ್ನು ಬೆದರಿಸಿ 13,500 ರೂ. ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಜನತಾ ಬಜಾರ್ನಲ್ಲಿ ಬುಧವಾರ ನಡೆದಿದೆ. ಬೊಲೆರೊ ಗೂಡ್ಸ್ ವಾಹನ ಚಾಲಕ ಆಸಿಫಖಾನ್ ಹೊಂಡದ ಎಂಬಾತ ಚನ್ನಮ್ಮ ವೃತ್ತದ ಬಳಿ ನಿಂತಿದ್ದರು. ಬಾಡಿಗೆಗೆ ನಿಮ್ಮ ವಾಹನ ಬೇಕಾಗಿದೆ ಎಂದು ಹೇಳಿದ ಮೂವರು ವಾಹನದಲ್ಲಿ ಜನತಾ ಬಜಾರ್ ಕಡೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಬೆದರಿಸಿ ಜೇಬಿನಲ್ಲಿದ್ದ ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವೃದ್ಧನ ಶವಪತ್ತೆ
ಅಳ್ನಾವರ: ಪಟ್ಟಣದ ಆಜಾದ್ ರಸ್ತೆ ಬಳಿ ಅಪರಿಚಿತ ವೃದ್ಧನ ಶವ ಪತ್ತೆಯಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಪಟ್ಟಣಕ್ಕೆ ಬಂದು ಹಳೇ ಬಸ್ ನಿಲ್ದಾಣದ ಹತ್ತಿರ ಭಿಕ್ಷೆ ಬೇಡುತ್ತಿದ್ದ. ವ್ಯಕ್ತಿಯು 8 ದಿನಗಳಿಂದ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ಆ. 16ರಂದು ಸಾವನ್ನಪ್ಪಿರಬಹುದು ಎಂದು ಸ್ಥಳೀಯ ವ್ಯಾಪಾರಿ ಶ್ರೀಕಾಂತ ಪಗಡಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತ ವ್ಯಕ್ತಿ 60 ವರ್ಷ ವಯಸ್ಸಿನವನಾಗಿದ್ದು, ಕೆಂಪು ಗೋದಿ ಬಣ್ಣ ಹೊಂದಿದ್ದಾನೆ. ಈ ವ್ಯಕ್ತಿಯ ಕುರಿತು ಮಾಹಿತಿ ಇದ್ದವರು ಧಾರವಾಡ ಗ್ರಾಮೀಣ ಸಿಪಿಐ ಕಚೇರಿ ಅಥವಾ ಅಳ್ನಾವರ ಪೊಲೀಸ್ ಠಾಣೆಗೆ ಸಂರ್ಪಸಲು ಕೋರಲಾಗಿದೆ.