ವರದಕ್ಷಿಣೆ ಕಿರಕುಳ: ಗೃಹಿಣಿ ಆತ್ಮಹತ್ಯೆ

ವರದಕ್ಷಿಣೆ ಕಿರಕುಳ: ಗೃಹಿಣಿ ಆತ್ಮಹತ್ಯೆ
Published on

 ಹಾಸನ: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಜಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗಂಡಸಿ ಹೋಬಳಿ ಮಾರಶೆಟ್ಟಿಹಳ್ಳಿ ಕೊಪ್ಪಲು ಗ್ರಾಮದ ಶಾಂತಮ್ಮ ಹಾಗೂ ಶಂಕರೇಗೌಡ ದಂಪತಿಯ ಎರಡನೇ ಮಗಳು ಗೀತಾ (24) ಮೃತ ಗೃಹಿಣಿ.

ಗೀತಾ ಅವರನ್ನು ಮೂರು ವರ್ಷಗಳ ಹಿಂದೆ ಜಕ್ಕನಹಳ್ಳಿ ಗ್ರಾಮದ ಲಕ್ಷ್ಮೇಗೌಡರ ಮಗ ನಾಗೇಶ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಎರಡು ವರ್ಷದ ಹೆಣ್ಣು ಮಗುವಿದೆ. ಮದುವೆಯಾದ ದಿನದಿಂದಲೂ ತವರು ಮನೆಯಿಂದ ವರದಕ್ಷಿಣೆ ತರುವಂತೆ ಗೀತಾಳಿಗೆ ಗಂಡ ಸೇರಿದಂತೆ ಗಂಡನ ಮನೆಯವರು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಗೀತಾ ಪೋಷಕರು ಆರೋಪಿಸಿದ್ದಾರೆ.

ವರದಕ್ಷಿಣಿಗಾಗಿ ಪ್ರತಿದಿನ ಗಂಡ ನಾಗೇಶ, ಅತ್ತೆ ವನಜಾಕ್ಷಿ, ಮಾವ ಲಕ್ಷ್ಮೇಗೌಡ ಮತ್ತು ನಾಗೇಶನ ಅಕ್ಕ ಶ್ವೇತಾ 4 ಜನರು ಕಿರುಕುಳ ನೀಡುತ್ತಿದ್ದಾರೆ ಎಂದು ಗೀತಾ ಮನೆಯವರಿಗೆ ಫೋನ್ ಮಾಡಿ ಅಳಲು ತೋಡಿಕೊಳ್ಳುತ್ತಿದ್ದರು. ಹಣ ಸಿಕ್ಕಿದ ತಕ್ಷಣ ನೀಡುವುದಾಗಿ ಮನೆಯವರು ಸಮಾಧಾನ ಮಾಡುತ್ತಿದ್ದರು. ಈ ವಿಷಯವಾಗಿ ಎರಡು ಕುಟುಂಬಗಳ ನಡುವೆ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಪರಿಸ್ಥಿತಿ ಹೀಗೆ ಮುಂದುವರಿದಾಗ ಗೀತಾ ಹಾಗೂ ಮಗುವನ್ನು ತವರಿಗೆ ವಾಪಸ್ ಕರೆದುಕೊಂಡು ಬರಲು ಮೂರು ತಿಂಗಳ ಹಿಂದೆ ಗೀತಾ ಚಿಕ್ಕಪ್ಪ ರಮೇಶ್ ಜಕ್ಕನಹಳ್ಳಿ ಗ್ರಾಮಕ್ಕೆ ಹೋದಾಗ ಗಂಡನ ಮನೆಯವರು ಅವರಿಗೆ ಬಾಯಿಗೆ ಬಂದಂತೆ ಬೈಯ್ದು ಜಗಳವಾಡಿ ವಾಪಸ್ ಕಳುಹಿಸಿದ್ದರು.

ಬುಧವಾರ ಸಂಜೆ ಗೀತಾ ಮೃತಪಟ್ಟಿರುವ ವಿಚಾರ ತಿಳಿದುಬಂದಿದೆ. ಗೀತಾಳಿಗೆ ವರದಕ್ಷಿಣೆ ಹಣ ತರುವಂತೆ ನೀಡುತ್ತಿದ್ದ ಕಿರುಕುಳ ತಾಳಲಾರದೇ ಮೃತಪಟ್ಟಿದ್ದು, ಆಕೆಯ ಸಾವಿಗೆ ಕಾರಣವಾದ ನಾಗೇಶ, ವನಜಾಕ್ಷಿ, ಲಕ್ಷ್ಮೇಗೌಡ, ಶ್ವೇತಾ ಇವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಗೀತಾ ಅವರ ತಾಯಿ ಶಾಂತಮ್ಮ ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net