

ಯಳಂದೂರು: ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಕೆ. ಗುಡಿ ವಲಯದಲ್ಲಿ ವಲಯದ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನೋದ್‌ಗೌಡ ಬೇರೆಡೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರಿಗೆ ನಲ್ಲೂರು ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಲ್ಲಿ ಸೋಮವಾರ ಸಂಜೆ ಬೀಳ್ಕೊಡುಗೆ ನೀಡಲಾಯಿತು.
ಇಲಾಖೆಯ ಅಧಿಕಾರಿಗಳು, ನೌಕರರು ಸೇರಿದಂತೆ ಸುತ್ತಮುತ್ತಲ ಗ್ರಾಮದ ಹತ್ತಾರು ಮಂದಿ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ರೈತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿನೋದ್‌ಗೌಡ ಜನಸ್ನೇಹಿ ಹಾಗೂ ರೈತ ಸ್ನೇಹಿಯಾಗಿದ್ದರು. ಇವರು ಕಾಡುಪ್ರಾಣಿಗಳ ಉಪಟಳದಿಂದ ನಮಗೆ ರಕ್ಷಣೆ ನೀಡಿದ್ದರು. ಇವರು ಅಧಿಕಾರದಲ್ಲಿದ್ದ 2 ವರ್ಷ 3 ತಿಂಗಳ ಅವಧಿಯಲ್ಲಿ ನಮ್ಮ ಬೆಳೆಗಳು ಕಾಡುಪ್ರಾಣಿಗಳಿಂದ ರಕ್ಷಿಸಿದ್ದರು ಎಂದರು.
ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಮಲ್ಲೇಶಪ್ಪ ಮಾತನಾಡಿ, ವಿನೋದ್‌ಗೌಡ ಅವರು ಇಲ್ಲಿನ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದರು. 40 ರಿಂದ 50 ಲಕ್ಷ ರೂ. ವರೆಗಿದ್ದ ಪ್ರವಾಸೋದ್ಯಮದ ಆದಾಯವನ್ನು 1ಕೋಟಿ ರೂ.ಗೆ ಏರಿಸಿದರು ಎಂದರು.
ಆರ್‌ಎಫ್‌ಒ ವಿನೋದ್‌ಗೌಡ ಮಾತನಾಡಿ, ನನ್ನ ಅವಧಿಯಲ್ಲಿ ಇಷ್ಟು ಕೆಲಸಗಳನ್ನು ಮಾಡಲು ಸಿಬ್ಬಂದಿಯ ಸಹಕಾರವೇ ಕಾರಣ. ಜನರೊಂದಿಗೆ ನಮ್ಮ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡಿದ್ದೂ ಕೂಡ ಕಾರಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಬ್ಬಂದಿ, ರೈತರು, ಸಾರ್ವಜನಿಕರು ವಿನೋದ್‌ಗೌಡ ಹಾಗೂ ಹೊಸದಾಗಿ ಇಲ್ಲಿಗೆ ಬಂದಿರುವ ಆರ್‌ಎಫ್‌ಒ ನರೇಶ್‌ರಿಗೆ ಗೌರವ ಸಮರ್ಪಣೆ ಮಾಡಿದರು. ಎಸಿಎಫ್ ಉಮೇಶ್, ಮಂಜುನಾಥ್, ಡಿಆರ್‌ಎಫ್‌ಒ ಸದಾಶಿವ, ಟಿ. ಸುಂದರ್, ಚಂದ್ರಕುಮಾರ್ ಇದ್ದರು.