

ಬಳ್ಳಾರಿ : ಜಿಲ್ಲಾದ್ಯಂತ ಹಿಂದೂಗಳು ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ದಿನ ವರಮಹಾಲಕ್ಷ್ಮಿ ಹಬ್ಬ/ ವ್ರತವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನ ಮಹಾಲಕ್ಷ್ಮಿಯನ್ನು ಪೂಜಿಸಿದರೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಅಷ್ಟೈಶೈರ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ, ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು. ಹಬ್ಬದ ಅಂಗವಾಗಿ ನಗರ ಸೇರಿದಂತೆ ಜಿಲ್ಲಾದ್ಯಂತ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂತು. ಮಹಿಳೆಯರು ವರಮಹಾಲಕ್ಷ್ಮಿ ವ್ರತ ಆಚರಿಸಿದರು. ಬಾಳೆ ಕಂದು, ಮಾವಿನ ಸೊಪ್ಪು, ಕಬ್ಬಿನ ಪೈರುಗಳ ತೋರಣಗಳಿಂದ ಮನೆಗಳನ್ನು ಆಲಂಕರಿಸಲಾಗಿತ್ತು. ಮನೆ ಮುಂಭಾಗದಲ್ಲಿ ಮಹಿಳೆಯರು ಬಣ್ಣ ಬಣ್ಣದ ರಂಗೋಲಿಗಳು ಹಬ್ಬದ ಕಳೆಯನ್ನು ಹೆಚ್ಚಿಸಿತ್ತು. ಹೊಸ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಮಹಿಳೆಯರು ಮನೆಗಳಲ್ಲಿ ಬೆಳಗ್ಗೆಯಿಂದ ಉಪವಾಸ ಇದ್ದು, ಮಹಾಲಕ್ಷ್ಮಿಯ ಮೂರ್ತಿ ಸ್ಥಾಪಿಸಿ, ಹೂವು, ಚಿನ್ನಾಭರಣಗಳಿಂದ ಆಲಂಕರಿಸಿ ಪೂಜೆ ಸಲ್ಲಿಸಿದರು. ಹೊಸ ಧಿರಿಸಿನಲ್ಲಿ ಮಿಂಚುತ್ತಿದ್ದ ಹೆಣ್ಣುಮಕ್ಕಳು, ಮಕ್ಕಳು ಪೂಜೆಯಲ್ಲಿ ಪಾಲ್ಗೂಂಡರು. ಮನೆಗಳಲ್ಲಿ ಒಬ್ಬಟ್ಟು, ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ, ಪಾಯಸ ಸೇರಿದಂತೆ ವಿವಿಧ ಭಕ್ಷೃಗಳನ್ನು ತಯಾರಿಸಿ ಮಹಾಲಕ್ಷ್ಮಿಗೆ ನೈವೇದ್ಯ ಮಾಡಿದರು. ನಗ ನಾಣ್ಯಗಳನ್ನು ಲಕ್ಷ್ಮಿಯ ಮುಂದೆ ಇಟ್ಟು ಐಶ್ವರ್ಯಕ್ಕಾಗಿ ಪ್ರಾರ್ಥಿಸಿದರು. ಸುಮಂಗಲಿಯರನ್ನು ಮನೆಗೆ ಕರೆದು, ಆರಿಸಿನ ಕುಂಕುಮ ಕೊಟ್ಟರು. ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಅಡುಗೆಯನ್ನೂ ಸಿದ್ಧಪಡಿಸಲಾಗಿತ್ತು, ನೆಂಟರಿಷ್ಟರು, ಸ್ನೇಹಿತರನ್ನು ಆಹ್ವಾನಿಸಿ ವಿಶೇಷ ಊಟ ಬಡಿಸಿದರು.
ವಿಶೇಷ ಪೂಜೆ : ಹಬ್ಬದ ಅಂಗವಾಗಿ ನಗರದ ಕನಕ ದುರ್ಗಮ್ಮ ದೇವಿ, ಸಣ್ಣ ದುರ್ಗಮ್ಮ , ಲಕ್ಷ್ಮಿ ದೇವಿ ದೇವಲಾಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಮಹಾಲಕ್ಷ್ಮಿ ಸೇರಿದಂತೆ ದೇವಿಯರ ಸಾನಿಧ್ಯ ಇರುವ ದೇಗುಲಗಳಲ್ಲಿ ದೇವತೆಗಳ ವಿಗ್ರಹಕ್ಕೆ ವಿಶೇಷ ಆಲಂಕಾರ ಮಾಡಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ದೇವಲಾಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಹಲವು ದೇವಾಲಯಗಳಿಗೆ ವಿದ್ಯುತ್ ದೀಪಾಲಂಕರದಿಂದ ಝಗಮಗಿಸಿದವು. ನಗರ ಸೇರಿ ಜಿಲ್ಲೆಯ ಪ್ರಮುಖ ಬೀದಿಗಳಲ್ಲಿ ಹಬ್ಬಕ್ಕೆ ಬೇಕಾಗಿರುವ ವಸ್ತುಗಳ ಖರೀದಿ ಜೋರಾಗಿತ್ತು. ಇಲ್ಲಿನ ಹೂವಿನ, ಹಣ್ಣಿನ ಮಾರುಕಟ್ಟೆ ಸೇರಿ ಪ್ರಮುಖ ಬೀದಿಗಳಲ್ಲಿ ಜನ ಜಂಗುಳಿ ಹೆಚ್ಚಾಗಿ ಕಂಡು ಬಂತು.