

ಹಾಸನ: ತನ್ನ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಅನುಮತಿ ಇಲ್ಲದೆ ಕಡಿದಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಯೋವೃದ್ಧ ನಿವೃತ್ತ ಶಿಕ್ಷಕನ ಮೇಲೆ ಪ್ರಕರಣ ದಾಖಲಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೇಸಾಯಗಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ಕುಮಾರ್ ಆರೋಪಿಸಿದರು.
ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಹೋಬಳಿ ಆನೆ ಕನ್ನಂಬಾಡಿಯ ನಿವೃತ್ತ ಶಿಕ್ಷಕ ಚಂದ್ರಪ್ಪ ಅವರು ತಮ್ಮ ಸ್ವಂತ ಐದು ಎಕರೆ ಜಮೀನಿನಲ್ಲಿ 56 ಶ್ರೀಗಂಧದ ಮರಗಳನ್ನು ಬೆಳೆದಿದ್ದಾರೆ. ಎರಡು ವರ್ಷಗಳಿಂದ ಕಳ್ಳರು ಮರಗಳನ್ನು ಕಡಿದು ಒತ್ತೊಯ್ದಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆಗೂ ದೂರು ನೀಡಲಾಗಿದೆ. ಅದಾದ ಬಳಿಕ ಚಂದ್ರಪ್ಪ ಅವರೇ ಶ್ರೀಗಂಧದ ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಒಂದು ವರ್ಷದಿಂದ ನಾಲ್ಕು ಪತ್ರಗಳನ್ನು ಬರೆದಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಮರಗಳನ್ನು ರಕ್ಷಣೆ ಮಾಡಲು ಅವುಗಳನ್ನು ಕಡಿದು ತೋಟದ ಮನೆಯಲ್ಲಿ ಇಟ್ಟಿದ್ದರು. ಅದಾದ ಬಳಿಕ ತಾವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರಗಳನ್ನು ಕಡಿದಿದ್ದು, ಅವುಗಳನ್ನು ಸಾಗಣೆ ಮಾಡಲು ಅನುಮತಿ ನೀಡಬೇಕೆಂದು ಮನವಿ ಮಾಡಿದಾಗ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಚಂದ್ರಪ್ಪ ಅವರ ಮೇಲೆಯೇ ಪ್ರಕರಣ ದಾಖಲಿಸಿ ಹಿಂಸೆ ನೀಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿವೃತ್ತ ಶಿಕ್ಷಕ ಚಂದ್ರಪ್ಪ ಮಾತನಾಡಿ, 82 ವರ್ಷ ವಯಸ್ಸಾಗಿರುವ ನಾನು ನಿವೃತ್ತಿ ನಂತರ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನೇ ಕಷ್ಟಪಟ್ಟು ಬೆಳೆದ ಮರಗಳನ್ನು ಕಳ್ಳರು ಒತ್ತೊಯ್ದೊಗ ಯಾವುದೇ ಅಧಿಕಾರಿಗಳು ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಆದರೆ ಇದೀಗ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಸಿಬ್ಬಂದಿಯನ್ನು ತಕ್ಷಣವೇ ಸೇವೆಯಿಂದ ಅಮಾನತ್ತುಗೊಳಿಸಿ ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಒಂದೆಡೆ ಗಂಧದ ಮರ ಬೆಳೆಯಲು ಉತ್ತೇಜನ ನೀಡುವ ಅರಣ್ಯ ಇಲಾಖೆ, ಬೆಳೆದ ನಂತರ ಬೆಳೆಗಾರರಿಗೆ ಹಿಂಸೆ ನೀಡುತ್ತಿದೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಇಡೀ ರಾಜ್ಯದ ಶ್ರೀಗಂಧದ ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮರಗಳ ಕಟಾವು ಹಾಗೂ ಸಾಗಣೆ ಮಾಡುವ ಅನುಮತಿಯ ವ್ಯಾಪ್ತಿಯನ್ನು ತೋಟಗಾರಿಕಾ ಇಲಾಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.