ವಯಸ್ಸಾದವರ ಆರೈಕೆ ಪುಣ್ಯದ ಕೆಲಸ

Health
Published on

ಚಿತ್ರದುರ್ಗ: ನಿರಾಶ್ರಿತರು, ವಯಸ್ಸಾದವರನ್ನು ಆರೈಕೆ ಮಾಡುವುದು ಪುಣ್ಯದ ಕೆಲಸ. ಅದೇ ರೀತಿ ಮಕ್ಕಳ ಏಳ್ಗೆಗಾಗಿ ದುಡಿಯುವ ಪಾಲಕರನ್ನು ಮುಂದೆ ನಿರ್ಲಕ್ಷಿಸಬೇಡಿ ಎಂದು ನಗರಸಭೆ ಅಧ್ಯಕ್ಷೆ ಸುಮಿತಾ ಸಲಹೆ ನೀಡಿದರು.

ಕೆಳಗೋಟೆಯ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ನಿರಾಶ್ರಿತರ ಆಶ್ರಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆಶ್ರಯವಿಲ್ಲದ ನಿರಾಶ್ರಿತರನ್ನು ಗುರುತಿಸುವ ಕೆಲಸವಾಗಬೇಕು. ನಗರಸಭೆಯಿಂದಲೂ ಕೇಂದ್ರಗಳಿಗೆ ಅಗತ್ಯ ಸಹಕಾರ ನೀಡಲು ಚಿಂತಿಸಲಾಗುವುದು ಎಂದು ಭರವಸೆ ನೀಡಿದರು.

ಕೌಶಲ ಇಲಾಖೆ ಕಾರ್ಯಕ್ರಮಾಧಿಕಾರಿ ಹತೀಕ್ ರೆಹಮಾನ್ ಮಾತನಾಡಿ, 2013ರಲ್ಲಿ ಹೊಸದಿಲ್ಲಿಯಲ್ಲಿ ಚಳಿಗೆ 150 ನಿರ್ಗತಿಕರು ಮೃತಪಟ್ಟರು. ಆಗ ಸುಪ್ರೀಂ ಕೋರ್ಟ್ ಯಾವ ಕಾರಣಕ್ಕೂ ನಿರಾಶ್ರಿತರು ಊಟ, ವಸತಿ ಇಲ್ಲದೆ, ಸಾಯಬಾರದೆಂದು ಸರ್ಕಾರಕ್ಕೆ ಸೂಚಿಸಿದಾಗ ಅಂದಿನಿಂದ ಆಶ್ರಯ ಕೇಂದ್ರ ತೆರೆಯಲಾಗಿದೆ ಎಂದರು.

ಕೇಂದ್ರ ಸರ್ಕಾರ ಶೇ 60, ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನದ ನೆರವಿನೊಂದಿಗೆ ನಡೆಸಲಾಗುತ್ತಿದೆ. ಪ್ರತಿ 15 ದಿನಗಳಿಗೊಮ್ಮೆ ಆಸ್ಪತ್ರೆ, ಬಸ್, ರೈಲು ನಿಲ್ದಾಣ, ಎಪಿಎಂಸಿ ಇನ್ನಿತರೆಡೆ ಸರ್ವೆ ಕೈಗೊಂಡು ನಿರಾಶ್ರಿತರು ಕಂಡುಬಂದಲ್ಲಿ ಕೌನ್ಸಿಲಿಂಗ್ ನಡೆಸಿ, ತಾತ್ಕಾಲಿಕ ಆಶ್ರಯ ನೀಡಿ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ತಿಳಿಸಿದರು.

ಆಪ್ತ ಸಮಾಲೋಚನೆ ನಡೆಸಿ, ಸ್ವಯಂ ಉದ್ಯೋಗ ತರಬೇತಿ ಕೂಡ ನೀಡಲಾಗುವುದು. ಇದರಿಂದ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಲೇಖಕ ಎಚ್.ಆನಂದ್‌ಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳಿವೆ. ಆ ಎಲ್ಲ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

ಡಾ.ಎಸ್.ಪವಿತ್ರಾ ತಪಾಸಣೆ ನಡೆಸಿ, ಉತ್ತಮ ಆರೋಗ್ಯದ ಕುರಿತು ಸಲಹೆಗಳನ್ನು ನೀಡಿದರು. ಆರೋಗ್ಯ ಇಲಾಖೆಯ ಶ್ರೀನಿವಾಸ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ತಿಪ್ಪಣ್ಣ, ಚಿದಾನಂದಮೂರ್ತಿ, ಸೂರ್ಯನಾರಾಯಣ, ವಕೀಲೆ ಮಾದವಿ, ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net