

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸ್ನಾಯುಕ್ಷೀಣತೆ (ಸಾರ್ಕೆಪೀನಿಯಾ) ಮತ್ತು ಸ್ನಾಯುವಿನ ದೌರ್ಬಲ್ಯವು ವಯಸ್ಸು ಹೆಚ್ಚಾದಂತೆ ಸಾಮಾನ್ಯ. ಸ್ನಾಯು ದೌರ್ಬಲ್ಯದಿಂದ ಅಂಗವೈಕಲ್ಯ ಕೂಡ ಉಂಟಾಗಬಹುದು ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಹೇಳಿದರು.
ವಾರಣಾಸಿಯಲ್ಲಿ ಆಯೋಜಿಸಿದ್ದ ಭಾರತ ಹೃದಯ ಮತ್ತು ಮಧುಮೇಹ ಸಂಸ್ಥೆಯ 8ನೇ ವಾರ್ಷಿಕ ಸಮ್ಮೇಳನದಲ್ಲಿ ‘ಸಾರ್ಕೆಪೀನಿಯಾ-ಅರಿತುಕೊಳ್ಳಲು ಜಟಿಲವಾದ ಸಮಸ್ಯೆ‘ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಸಾಮಾನ್ಯವಾಗಿ 35ನೇ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಸ್ನಾಯು ಕ್ಷೀಣತೆಯು 60ನೇ ವಯಸ್ಸಿನ ನಂತ ಶೇ. 20ರಷ್ಟು ಜನರಲ್ಲಿ ಹಾಗೂ 75 ವಯಸ್ಸಿನ ನಂತರ ಶೇ. 60ರಷ್ಟು ಜನರಲ್ಲಿ ಕಂಡು ಬರುತ್ತದೆ. 80 ವರ್ಷದ ಬಳಿಕ ಸರ್ವೆಸಾಮಾನ್ಯ. ಇಳಿ ವಯಸ್ಸಿನಲ್ಲಿ ಜೋಲಿ ತಪ್ಪಿ ಬಿದ್ದಾಗ ತಲೆಗೆ ಪೆಟ್ಟು ಮತ್ತು ತೊಡೆಯ ಮೂಳೆ ಮುರಿಯುವ ಸಾಧ್ಯತೆ ಬಹಳ ಇರುತ್ತದೆ. ಯಾವುದೋ ಕಾರಣಕ್ಕೆ ಆಸ್ಪತ್ರೆಯಲ್ಲಿ ಎರಡು ವಾರಕ್ಕಿಂತ ಹೆಚ್ಚು ಸಮಯ ಕಳೆದಲ್ಲಿ ಸ್ನಾಯು ಕ್ಷೀಣತೆಯ ಪ್ರಮಾಣ ಶೇ. 20ರಿಂದ 25ರಷ್ಟು ಹೆಚ್ಚುತ್ತದೆ ಎಂದು ಹೇಳಿದರು.
ಹೆಚ್ಚು ಪ್ರೋಟೀನ್ ಸೇವಿಸುವುದರಿಂದ ಹಾಗೂ ರೆಸಿಸ್ಟನ್ಸ್ (ಪ್ರತಿರೋಧ) ವ್ಯಾಯಾಮ ಮಾಡುವುದರಿಂದ ಸ್ನಾಯುಕ್ಷೀಣತೆ ಸಮಸ್ಯೆಯನ್ನು ಮುಂದೂಡಬಹುದು ಅಥವಾ ತೀವ್ರತೆಯನ್ನಉ ಕಡಿಮೆಗೊಳಿಸಬಹುದು. ಕೈಗಳಿಗೆ ಡೆಂಬಲ್ಸ್ ಎತ್ತುವ ಹಾಗೂ ಕಾಲುಗಳಿಗೆ ಸ್ಕಾ್ವಟ್ ವ್ಯಾಯಾಮ ಉತ್ತಮ. ಇವುಗಳನ್ನು ವಾರದಲ್ಲಿ 2-3 ಬಾರಿ ಮಾಡಬೇಕು ಎಂದು ಸಲಹೆ ನೀಡಿದರು.
ಮಾಂಸಾಹಾರಿಗಳಿಗೆ ಮೀನು, ಚಿಕನ್, ತತ್ತಿ ಇವು ಅತ್ಯುತ್ತಮ ಪ್ರೋಟೀನ್ ಆಹಾರಗಳು. ಶಾಕಾಹಾರಿಗಳು ಒಂದು ಬಟ್ಟಲು ಬೆಳೆ, ತರಕಾರಿ, ಹಾಲು-ಹಣ್ಣು, ಮೊಸರು ಸೇವಿಸಬೇಕು. ಶಾಕಾಹಾರಿಗಳು ತತ್ತಿಯನ್ನು ಸೇವಿಸಬಹುದು. ನಿತ್ಯ ನಡಿಗೆ, ಸೈಕಲ್ ತುಳಿಯುವುದು ಹಾಗೂ ಜಿಮ್ ಮಾಡುವುದು ಉತ್ತಮ ಅಭ್ಯಾಸಗಳಾಗಿವೆ ಎಂದು ಹೇಳಿದರು.
ಸಮ್ಮೇಳನದಲ್ಲಿ ದೇಶದ ವಿವಿಧೆಡೆಯ 600ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.