

ಬೆಂಗಳೂರು: ಬೆಳಗಾವಿಯಿಂದ ನಗರಕ್ಕೆ ಬಂದಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿ ೮೦ ಸಾವಿರ ರೂ. ಸುಲಿಗೆ ಮಾಡಿರುವ ಪ್ರಕರಣ ಮೆಜೆಸ್ಟಿಕ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಬೆಳಗಾವಿಯಲ್ಲಿ ನ್ಯಾಯಬೆಲೆ ಅಂಗಡಿ ಇಟ್ಟುಕೊಂಡಿರುವ ಸುರೇಶ್, ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗನನ್ನು ಭೇಟಿಯಾಗಲು ಶುಕ್ರವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದಿದ್ದರು. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಳಿದ ಅವರು ಮೆಜೆಸ್ಟಿಕ್‌ನ ಬಿಎಂಟಿಸಿ ಏಳನೇ ಡಿಪೋ ಬಳಿಯ ಉದ್ಯಾನದಲ್ಲಿ ಮಗನಿಗಾಗಿ ಕಾಯುತ್ತಾ ಕುಳಿತಿದ್ದರು. ಆಗ ಅಲ್ಲಿಗೆ ಹೋದ ದುಷ್ಕರ್ಮಿಯು ಸುರೇಶ್ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಬ್ಲೇಡ್‌ನಿಂದ ಹೊಟ್ಟೆ ಮತ್ತು ತೊಡೆಗೆ ಇರಿದು ಹಣ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದಿರುವ ಉದ್ಯಾನ ಹಾಗೂ ಬಿಎಂಟಿಸಿ ಡಿಪೋ ಸುತ್ತಮುತ್ತಲಿನ ಸ್ಥಳವು ನಿರ್ಜನ ಪ್ರದೇಶವಾಗಿದೆ. ಆ ಭಾಗದಲ್ಲಿ ಸಾಮಾನ್ಯವಾಗಿ ಜನರು ಓಡಾಡುವುದಿಲ್ಲ. ದುಷ್ಕರ್ಮಿಯು ಸುರೇಶ್ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಕೃತ್ಯ ಎಸಗಿರುವ ಶಂಕೆಯಿದೆ. ಆರೋಪಿ ಪತ್ತೆಗಾಗಿ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.