ವಿಪತ್ತು ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಿ

18 GLD MEETING
ಗುಳೇದಗುಡ್ಡದಲ್ಲಿ ತಹಸೀಲ್ದಾರ್ ಮಂಗಳಾ ಎಂ. ಅಧ್ಯಕ್ಷತೆಯಲ್ಲಿ ತಾಲೂಕು ಅಧಿಕಾರಿಗಳ ಸಭೆ ನಡೆಯಿತು.
Published on

ಗುಳೇದಗುಡ್ಡ: ಪ್ರವಾಹಕ್ಕೆ ತುತ್ತಾಗಬಹುದಾದ ತಾಲೂಕಿನ ಗ್ರಾಮಗಳ ಸುರಕ್ಷತೆಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಮುಂಗಾರು ಹಂಗಾಮಿನ ವಿಪತ್ತು ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದು ತಾಲೂಕು ವಿಪತ್ತು ನಿರ್ವಹಣೆ ನೊಡಲ್ ಅಧಿಕಾರಿ ಎಲ್.ಐ. ರೂಢಗಿ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ತಾಲೂಕಿನ ವಿಪತ್ತು ನಿರ್ವಹಣೆ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.

ತಹಸೀಲ್ದಾರ್ ಮಂಗಳಾ ಎಂ. ಮಾತನಾಡಿ, ನದಿ ಪಾತ್ರದಲ್ಲಿರುವ ತಾಲೂಕಿನ 12 ಗ್ರಾಮಗಳಲ್ಲಿ ಅನ್ವಯವಾಗುವ ಇಲಾಖಾವಾರು ಅಧಿಕಾರಿ ಹಾಗೂ ಸಿಬ್ಬಂದಿ ನಿರ್ವಹಿಸುವ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ನೈರ್ಮಲ್ಯ, ಕುಡಿಯುವ ನೀರಿನ ಸಂಗ್ರಹದ ಮೂಲದಿಂದ ಹಿಡಿದು ಪೂರೈಕೆಯಾಗುವ ಸ್ಥಳದವರೆಗೂ ನೀರಿನ ಶುದ್ಧತೆ ಪರೀಕ್ಷೆ ಮಾಡಬೇಕು. ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು. ಅಗ್ನಿಶಾಮಕ ದಳದವರು ಪ್ರವಾಹ ಸಂದರ್ಭ ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಬಳಸುವ ಉಪಕರಣಗಳ ಸುಸ್ಥಿತಿ ಬಗ್ಗೆ ಮುಂಜಾಗ್ರತೆ ವಹಿಸಬೇಕೆಂದು ಸೂಚನೆ ನೀಡಿದರು.

ಹೆಸ್ಕಾಂ ಎಇಇ ಪ್ರಕಾಶ ಪೂಚಗುಂಡಿ, ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ, ತಾಲೂಕು ಪಂಚಾಯಿತಿಯ ಎಸ್.ಎಸ್. ಅಂಗಡಿ, ಆರೋಗ್ಯ ಇಲಾಖೆಯ ಡಾ. ಅನೀಲ ಉಕ್ಕಲಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಎಸ್. ಬಂಡಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಎ.ಕೆ. ಮಕಾಂದಾರ, ಅಗ್ನಿಶಾಮಕ ಇಲಾಖೆಯ ಬಿ.ಪಿ. ಮರಡಿ, ಪಿಆರ್‌ಇಡಿ ಇಲಾಖೆ ಎ.ಎಸ್. ತೋಪಲಕಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net