ವನ್ಯಜೀವಿಗಳನ್ನುಉಗುರು ಮತ್ತಿತರ ಕಳೆಬರಹ ಮಾರಾಟ: ಜಾಲ ಭೇದಿಸಿದ ಹಾಸನ ಪೊಲೀಸರು

ವನ್ಯಜೀವಿಗಳನ್ನುಉಗುರು ಮತ್ತಿತರ ಕಳೆಬರಹ ಮಾರಾಟ: ಜಾಲ ಭೇದಿಸಿದ ಹಾಸನ ಪೊಲೀಸರು
Published on

ಹಾಸನ: ವನ್ಯಜೀವಿಗಳನ್ನು ಕೊಂದು ಅದರ ಉಗುರುಗಳು ಮತ್ತಿತರ ಕಳೆಬರಹಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಹಾಸನ ಪೊಲೀಸರು, ಐವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.


ಹಾಸನ ಉಪ ವಿಭಾಗದಲ್ಲಿ ಇತ್ತೀಚೆಗೆ ವನ್ಯಜೀವಿಗಳನ್ನು ಹತ್ಯೆ ಮಾಡಿ ಅದರ ಉಗುರುಗಳನ್ನು ಮಾರಾಟ ಮಾಡುವ ಜಾಲ ಕಾರ್ಯನಿರ್ವಹಿಸುತ್ತಿದ್ದ ಮಾಹಿತಿ ಮೇರೆಗೆ ಎಎಸ್‌ಪಿ ತಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಉದಯಭಾಸ್ಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡವು ಪ್ರಕರಣವನ್ನು ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿ, ಚಿರತೆಯ 18 ಉಗುರುಗಳನ್ನು ವಶಪಡಿಸಿಕೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ನಗರದ ದೇವರಾಯಪಟ್ಟಣ ಬೈಪಾಸ್ ಪಕ್ಕದಲ್ಲಿ ನ.29 ರಂದು ಸಂಜೆ ಐವರು ಆರೋಪಿಗಳು ಒಮಿನಿ ಕಾರು ಮತ್ತು ಬೈಕ್ ನಿಲ್ಲಿಸಿಕೊಂಡು ಚಿರತೆಯೊಂದರ ಕತ್ತರಿಸಿದ ನಾಲ್ಕು ಪಾದಗಳ ಸಮೇತ ಉಗುರುಗಳನ್ನು ಮಾರಾಟ ಮಾಡಲು ಬಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಡಿವೈಎಸ್‌ಪಿ ಉದಯಭಾಸ್ಕರ್ ನೇತೃತ್ವದ ಪೊಲೀಸರ ತಂಡ ತಕ್ಷಣ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.


ಆಲೂರು ತಾಲೂಕು ಕೆ. ಹೊಸಕೋಟೆ ಹೋಬಳಿ ಮಾದಿಹಳ್ಳಿ ಗ್ರಾಮದ ಮಂಜೇಗೌಡ, ಸಕಲೇಶಪುರ ತಾಲೂಕು ಬೆಳಗೋಡು ಹೋಬಳಿ ಹೆಗ್ಗೋವೆ ಗ್ರಾಮದ ಕಾಂತರಾಜು, ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿ ಪುರ ಗ್ರಾಮದ ಕಾಂತರಾಜು, ಚಿಕ್ಕಮಗಳೂರು ತಾಲೂಕು ಲಕ್ಯಾ ಹೋಬಳಿ ಕಳಸಾಪುರ ಗ್ರಾಮದ ಮೋಹನ ಮತ್ತು ರೇಣುಕಾಕುಮಾರ ಬಂಧಿತ ಆರೋಪಿಗಳು.


ಬಂಧಿತ ಆರೋಪಿಗಳಿಂದ ಚಿರತೆಯ 18 ಉಗುರುಗಳು, ಒಂದು ಒಮಿನಿ ಕಾರು, ಎರಡು ಬೈಕ್‌ಗಳು ಮತ್ತು ಏಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ 1972 ರೀತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ವಿವರ ನೀಡಿದರು.


ಈ ಪ್ರಕರಣ ಭೇದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಇನ್‌ಸ್ಪೆಕ್ಟರ್ ರೇವಣ್ಣ, ಪಿಎಸ್‌ಐ ಕುಮಾರ್, ಸಿಬ್ಬಂದಿ ಕೃಷ್ಣಮೂರ್ತಿ, ಮಂಜುನಾಥ್, ಚೇತನ್, ರಘುನಾಥ್, ಕಿರಣ್ ಮತ್ತು ಖಾದರ್ ಅವರನ್ನು ಎಸ್ಪಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net