ಹನೂರು: ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ಕಾಪಾಡುವುದರ ಜತೆಗೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಉಪ ವಲಯ ಅರಣ್ಯಾಧಿಕಾರಿ ನಂದೀಶ್ ತಿಳಿಸಿದರು.
ಪಟ್ಟಣದ ಜಿ.ವಿ. ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಇಕೋಕ್ಲಬ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಾಮರಾಜನಗರ ವನ್ಯಜೀವಿಗಳ ತಾಣವಾಗಿದ್ದು, ಬಂಡಿಪುರ, ಬಿಆರ್‌ಟಿ ಹಾಗೂ ಮಲೆಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಅರಣ್ಯ ಪ್ರದೇಶ ಸಮೃದ್ಧಿಯಿಂದ ಕೂಡಿದೆ. ಹಾಗಾಗಿ, ಶುದ್ಧ ಗಾಳಿಯನ್ನು ನೀಡುವಲ್ಲಿ ಜಿಲ್ಲೆಯು ಮುಂದಿದೆ. ರಾಜ್ಯದಲ್ಲಿಯೇ ಹೆಚ್ಚು ಹುಲಿ ಹಾಗೂ ಆನೆಯನ್ನು ಹೊಂದಿರುವ ಜಿಲ್ಲೆ ನಮ್ಮದಾಗಿದೆ. ಆದ್ದರಿಂದ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜತೆಗೆ ಸಾರ್ವಜನಿಕರಲ್ಲೂ ಅರಣ್ಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿದೆ. ಇದರಿಂದ ಪರಿಸರದಲ್ಲಿ ಸಮತೋಲವನ್ನು ಕಾಪಾಡಿಕೊಳ್ಳವುದರ ಜತೆಗೆ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಳಿಕ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸುವುದರ ಮೂಲಕ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಪ್ರಾಂಶುಪಾಲ ಲಾಜರಸ್, ಉಪನ್ಯಾಸಕರಾದ ನಂಜುಂಡಯ್ಯ, ಶಿವಕುಮಾರ್, ಹರೀಶ್, ಮಹೇಂದ್ರ, ಕುಸುಮ, ಸವಿತಾ, ಫರ್ಹಾನ, ಚೈತ್ರಾ, ನಂದಿನಿ, ರಕ್ಷಿತಾ, ಸಹನಾ, ನರ್ಮದಾ, ಸುಮತಿ, ದೇವಿಕಾ ಹಾಗೂ ಇನ್ನಿತರರು ಇದ್ದರು.