

ಹುಲಸೂರು: ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಜೀವ ಸಂಕುಲಕ್ಕೆ ಅವಶ್ಯವಾಗಿದೆ. ಅದರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪ್ರಾದೇಶಿಕ ವಲಯ ಆರಣ್ಯ ಅಧಿಕಾರಿ ಐಶ್ವರ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ೬೯ನೇ ವನ್ಯಜೀವಿ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ನಮ್ಮ ಸುತ್ತಲಿನ ವಾತಾವರಣದಲ್ಲಿ ಅರಣ್ಯ ಸಂಪತ್ತು ಹೆಚ್ಚಿಸಲು ಶ್ರಮಿಸಬೇಕು. ಮುಂದಿನ ವರ್ಷ ಶಾಲೆ ಮಕ್ಕಳಿಗೆ ಚಿಣ್ಣರ ವನ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಉಪ ವಲಯ ಅರಣ್ಯ ಅಧಿಕಾರಿ ಸಂತೋಷ ಯಾಚೆ ಮಾತನಾಡಿ, ವನ್ಯ ಜೀವಿಗಳು ಎಲ್ಲ ರೀತಿಯ ಪರಿಸರದಲ್ಲಿ ಕಂಡು ಬರುತ್ತವೆ. ಪ್ರಪಂಚದಾದ್ಯAತ ವನ್ಯಜೀವಿ ಸಂಕುಲದ ಮೇಲೆ ಮಾನವನ ಪ್ರಭಾವ ಬೀರುತ್ತಿದೆ. ದೇಶದಲ್ಲಿಯೇ ಅತಿ ಹೆಚ್ಚು ಹುಲಿ ಮತ್ತು ಆನೆ ಹೊಂದಿದ ರಾಜ್ಯ ನಮ್ಮದು ಎಂದರು.
ಮುಖ್ಯಗುರು ಸೂರ್ಯಕಾಂತ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಮಕ್ಕಳಲ್ಲಿ ಕಾಡು ಪ್ರಾಣಿ, ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಚಿಣ್ಣರ ವನ ದರ್ಶನ ಕಾರ್ಯಕ್ರಮ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.
ಉರಗ ತಜ್ಞ ಸೈಯದ್ ವಿವಿಧ ಹಾವುಗಳನ್ನು ಪ್ರದರ್ಶಿಸಿ, ಹಾವು ಕಚ್ಚಿದಾಗ ನೀಡಬೇಕಾದ ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಮಂಠಾಳ ವಲಯ ಉಪ ಅರಣ್ಯ ಅಧಿಕಾರಿ ಪ್ರಕಾಶ, ವನ್ಯಜೀವಿ ಛಾಯಾಗ್ರಾಹಕ ವಿವೇಕ ಮಾತನಾಡಿದರು.
ತಾಲೂಕು ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು.
ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಅಡಕೆ, ಗುರುಪ್ರಸಾದ ಮೆಂಟೆ, ಮಹೇಶ, ರೇಣುಕಾ ಚಿಲ್ಲರಗೆ, ದೇವೇಂದ್ರ ನಂಜವಾಡೆ, ಸಂಜೀವಕುಮಾರ, ಲಖನ್, ರೋಹನ್, ಅಮೀನಾ ಪರ್ವೇಜ್ ಇತರರಿದ್ದರು.