"ವನವಾಸಿ' ಅಧ್ಯಯನ, ಸಂಶೋಧನೆ ಅಗತ್ಯ

28
Published on

ಮೈಸೂರು: ವನವಾಸಿಗಳ ಕುರಿತು ಪರಿಣಾಮಕಾರಿಯಾಗಿ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹಕ ಮುಕುಂದ ತಿಳಿಸಿದರು.


ಚಾಮುಂಡಿಪುರಂನ ಬಸವೇಶ್ವರ ರಸ್ತೆಯಲ್ಲಿ ನಿರ್ಮಿಸಿರುವ ವನವಾಸಿ ಕಲ್ಯಾಣ ಕರ್ನಾಟಕ ಸಂಘಟನೆಯ ಪ್ರಾಂತ ಕಾರ್ಯಾಲಯದ ಕಚೇರಿ ‘ವನಶ್ರೀ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ದೇಶದಲ್ಲಿ 20-25 ವನವಾಸಿ ಸಮುದಾಯದ ಅಧ್ಯಯನ ಕೇಂದ್ರಗಳಿವೆ. ಕೆಲ ತಿಂಗಳ ಹಿಂದೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ವನವಾಸಿ ಕೇಂದ್ರದ ಕಚೇರಿ ಉದ್ಘಾಟಿಸಿದ್ದು, ಆ ಮೂಲಕ ದೇಶದ ವನವಾಸಿ ಸಮುದಾಯದಲ್ಲಿರುವ ಕೊರತೆಗಳು, ಸಂಸ್ಕೃತಿ, ಪರಂಪರೆ ಅಧ್ಯಯನಕ್ಕೆ ಉತ್ತೇಜನ ನೀಡಿದ್ದು, ಇದರೊಂದಿಗೆ ಬೇರೆಯ ಸಮಾಜಗಳಿಗೂ ವನವಾಸಿಗಳಲ್ಲಿ ಅಡಗಿರುವ ಮಹತ್ತರವಾದ ಜ್ಞಾನವನ್ನು ಪಸರಿಸುವ ಅವಕಾಶವೂ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನಗಳು ಇನ್ನಷ್ಟು ನಡೆಯಬೇಕಿದೆ ಎಂದು ಹೇಳಿದರು.


ವನವಾಸಿ ಸಮುದಾಯಗಳು ಶ್ರೇಷ್ಠ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿವೆ. ಪರಂಪರೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಯಬೇಕು. ಇವರ ಬಗ್ಗೆ ಅನೇಕರು ಅಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಲಾಭಕ್ಕಾಗಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಸಾಮಾಜಿಕ ಕಳಕಳಿ ಹೊಂದಿರುವ ಸಂಘಟನೆಗಳು ವನವಾಸಿ ಪರಂಪರೆ, ಸಂಸ್ಕೃತಿ ಉಳಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿವೆ ಎಂದರು.


ಕೆಲ ವಿಘಟಕ ಶಕ್ತಿಗಳು ವನವಾಸಿಗಳನ್ನು ವಿಭಜಿಸುವ ಹುನ್ನಾರ ನಡೆಸಿಕೊಂಡು ಬಂದಿವೆ. ಜನಗಣತಿಯಲ್ಲಿ ಒಆರ್ ಅಥವಾ ಇತರರು ಎಂದು ನಮೂದಿಸಲಾಗುತ್ತಿದೆ. ಇದನ್ನು ನಿವಾರಣೆ ಮಾಡಿ ನಾವೆಲ್ಲ ಒಂದು ಎಂಬ ಭಾವ ಮೂಡಿಸಬೇಕು. ವನವಾಸಿಗಳನ್ನು ಮತಾಂತರ ಮಾಡಲು ಕ್ರಿಶ್ಚಿಯನ್ ಮಿಷನರಿಗಳು ಪ್ರಯತ್ನಿಸುತ್ತಿವೆ. ಪ್ರಕೃತಿ ಪೂಜಕರನ್ನು ಪಾಶ್ಚಾತ್ಯರು ಲೇವಡಿ ಮಾಡುವ ಮೂಲಕ ಮತಾಂತರಕ್ಕೆ ಉತ್ತೇಜಿಸುತ್ತಿದ್ದಾರೆ. ಆದರೆ, ನಿಜವಾದ ವನವಾಸಿಗಳು ಪ್ರಕೃತಿ ಆರಾಧಿಸುವ ಮೂಲಕ ನಮ್ಮ ಪರಂಪರೆ ಮುಂದುವರಿಸಿದ್ದಾರೆ ಎಂದು ಹೇಳಿದರು.

ವನವಾಸಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಕಾವೇರಪ್ಪ ಚಕ್ಕೇರ, ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ರಮೇಶ್ ಬಾಬು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಡಾ.ಮುರಳಿ, ಕಾರ್ಯಾಧ್ಯಕ್ಷ ರಾಧಕೃಷ್ಣ ಮಳವಳ್ಳಿ, ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ, ವನವಾಸಿ ಮುಖಂಡರಾದ ಮಹದೇವಯ್ಯ, ಕಾಳಯ್ಯ ಬಂಡೀಪುರ, ಗಣೇಶ್, ಮಾಜಿ ಶಾಸಕ ಎಸ್.ಎ.ರಾಮದಾಸ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net