

ಶಿರಸಿ: ರಾಜ್ಯದ ಪ್ರಸಿದ್ಧ ಮಾರಿಕಾಂಬಾದೇವಿ ದ್ವೈವಾರ್ಷಿಕ ಜಾತ್ರಾ ಮಹೋತ್ಸವದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಇಡೀ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಮಾ. 3ರಿಂದ ಆರಂಭವಾಗುವ ಜಾತ್ರೆಯ ಪೂರ್ವ ವಿಧಿವಿಧಾನಗಳು ಈಗಾಗಲೇ ನಡೆದಿದ್ದು, ಮಂಗಳವಾರ ರಾತ್ರಿ ದೇವಿ ಕಲ್ಯಾಣೋತ್ಸವದೊಂದಿಗೆ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಈಗಾಗಲೇ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಬಿಡ್ಕಿಬೈಲಿನ ಜಾತ್ರಾ ಗದ್ದುಗೆ, ಮುಖಮಂಟಪದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಸರ್ಕಸ್ ಕಂಪನಿಗಳು, ಸ್ಟೇಷನರಿ, ತಿಂಡಿ-ತಿನಿಸುಗಳ ಅಂಗಡಿಗಳು, ಮನರಂಜನೆಯ ಆಟಗಳ ಮಳಿಗೆಗಳು ಸಿದ್ಧಗೊಳ್ಳುತ್ತಿವೆ. ಜಾತ್ರೆ ಅಂಗವಾಗಿ ಯಕ್ಷಗಾನ ಪ್ರದರ್ಶನವೂ ಇದೆ. ಜತೆಗೆ ಬೇರೆ ಬೇರೆ ನಾಟಕದ ಕಂಪನಿಗಳೂ ತಿಂಗಳುಗಳ ಕಾಲ ಬಿಡಾರ ಹೂಡಲಿವೆ. ಜಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಕೇಂದ್ರಗಳು, ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಾಹನ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಿದೆ.
ಕಳಶಾರೋಹಣ ಇಂದು: ಮಾರಿಕಾಂಬಾ ದೇವಾಲಯದಲ್ಲಿ ಮಂಗಳವಾರ ನಸುಕಿನಲ್ಲಿ ಕಲಶ ಪೂಜೆ ನೆರವೇರಲಿದೆ. ನಂತರ ದೇವಾಲಯದ ಎದುರಿನ ರಥದ ತುದಿಯಲ್ಲಿ ಕಳಶ ಆರೋಹಣದ ವಿಧಿವಿಧಾನವನ್ನು ಮಧ್ಯಾಹ್ನ 12.43ರ ಮುಹೂರ್ತದಲ್ಲಿ ನೆರವೇರಿಸಲಾಗುವುದು. ರಥ ಕಟ್ಟುವ ಆಚಾರ ಬಾಬುದಾರ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಪೂಜಾ ವಿಧಿವಿಧಾನದ ನಂತರ ಮರಾಠಿ ಬಾಬದಾರರು ಕಳಶವನ್ನು ರಥದ ಮೇಲ್ಭಾಗದಲ್ಲಿ ಜೋಡಿಸುವರು. ಬಳಿಕ ರಥವನ್ನು ಅಲಂಕರಿಸುವ ಕಾರ್ಯ ನಡೆಯಲಿದೆ.
ರಾತ್ರಿ ಕಲ್ಯಾಣೋತ್ಸವ: ದೇವಾಲಯದ ಸಭಾಮಂಟಪದಲ್ಲಿ ರಾತ್ರಿ 11.11ರಿಂದ 11.18ರೊಳಗೆ ದೇವಿಯ ಕಲ್ಯಾಣೋತ್ಸವ ನೆರವೇರಲಿದೆ. ಧರ್ಮದರ್ಶಿಗಳು, ಬಾಬದಾರ ಪ್ರಮುಖರು, ನಾಡಿಗರು ಸೇರಿ ಸಾವಿರಾರು ಭಕ್ತರು ಪಾಲ್ಗೊಳ್ಳುವರು. ಪ್ರಸಕ್ತ ವರ್ಷ ಭಕ್ತರಿಗೆ ಸ್ವಾಗತ ಕೋರಲು ದೇವಾಲಯ ಆಡಳಿತ ಮಂಡಳಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಾಗತ ಕಮಾನು ನಿರ್ವಿುಸಲಾಗಿದೆ. ಯಲ್ಲಾಪುರ ರಸ್ತೆ, ಹುಲೇಕಲ್ ರಸ್ತೆ, ಹುಬ್ಬಳ್ಳಿ ರಸ್ತೆ, ಸಿದ್ದಾಪುರ, ಕುಮಟಾ ಹಾಗೂ ಬನವಾಸಿ ರಸ್ತೆಗಳಲ್ಲಿ ಸ್ವಾಗತ ಕೋರಿ ಕಮಾನು ನಿರ್ವಿುಸಲಾಗಿದೆ.
ಗದ್ದುಗೆಯಲ್ಲಿ ಅಮ್ಮ ಬರುವ ಸಿದ್ಧತೆಗಾಗಿ ಸಕಲ ಕಾರ್ಯಗಳೂ ಸಮರೋಪಾದಿಯಲ್ಲಿ ನಡೆಯುತ್ತಿವೆ. ಇಡೀ ನಗರವೇ ಕಂಗೊಳಿಸುತ್ತಿದೆ. ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದು, ಜಾತ್ರೆಯ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿದೆ.| ಡಾ.ವೆಂಕಟೇಶ ನಾಯ್ಕ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ
ಸ್ಥಳೀಯ ಮಾರ್ಗ ರದ್ದು ಮಾಡಬೇಡಿ
ಕಾರವಾರ: ಜಾತ್ರೆಗಾಗಿ ಗ್ರಾಮೀಣ ಹಾಗೂ ನಗರದಲ್ಲಿ ಓಡಾಡುವ ಸ್ಥಳೀಯ ಮಾರ್ಗಗಳನ್ನು ರದ್ದು ಮಾಡಬಾರದು ಎಂದು ಕಾರವಾರದ ಸುಂಕೇರಿಯ ದಾಮೋದರ ಭಟ್, ತುಳಸಿದಾಸ ರಾಯ್ಕರ್ ಆಗ್ರಹಿಸಿದ್ದಾರೆ. ಕಾರವಾರ-ಸುಂಕೇರಿ ಮಾರ್ಗದಲ್ಲಿ ಹಲವು ವರ್ಷಗಳಿಂದ ಹತ್ತಾರು ಬಾರಿ ಓಡಾಡುತ್ತಿದ್ದ ಮಾರ್ಗವನ್ನು ನಷ್ಟದ ಕಾರಣ ನೀಡಿ ಎರಡು ವರ್ಷದಿಂದ ಕಡಿತ ಮಾಡಲಾಗಿದೆ. ದಿನಕ್ಕೆ ನಾಲ್ಕೈದು ಬಾರಿ ಮಾತ್ರ ಬಸ್ ಬಂದು ಹೋಗುತ್ತಿದೆ. ಸ್ಥಳೀಯ ಜಾತ್ರೆಗಳಿಗೆ ಬಸ್ ಬಳಸಿಕೊಂಡು ಸುಂಕೇರಿಗೆ ಹೋಗುವ ಬಸ್ಗಳನ್ನು ಹಲವು ಬಾರಿ ರದ್ದು ಮಾಡಲಾಗುತ್ತದೆ. ಆದರೆ, ಮಾ. 4ರಿಂದ ಪಿಯುಸಿ ಹಾಗೂ 27ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಪ್ರಾರಂಭವಾಗಲಿವೆ. ಕಾರವಾರ-ಸುಂಕೇರಿ ಮಾರ್ಗದಲ್ಲಿ ಶಾಲೆ, ಕಾಲೇಜ್ಗೆ ತೆರಳುವ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಇಂಥ ಸಂದರ್ಭದಲ್ಲಿ ಬಸ್ ರದ್ದು ಮಾಡಿದರೆ ಮಕ್ಕಳು ತೀವ್ರ ತೊಂದರೆ ಅನುಭವಿಸಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮನವಿ ಮಾಡಲು ಶಾಸಕಿ ರೂಪಾಲಿ ನಾಯ್ಕ ಅವರ ಕಚೇರಿಗೆ ಹಲವು ಬಾರಿ ಓಡಾಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಾತ್ರೆಗೆ ಹೆಚ್ಚುವರಿ 110 ಬಸ್
ಶಿರಸಿ: ಮಾರಿಕಾಂಬಾ ಜಾತ್ರೆಗೆ ಹೆಚ್ಚುವರಿಯಾಗಿ 110 ಬಸ್ಗಳು ಕಾರ್ಯಾಚರಿಸಲಿವೆ ಎಂದು ಎನ್ಡಬ್ಲು್ಯಕೆಆರ್ಟಿಸಿ ಅಧ್ಯಕ್ಷ ವಿ.ಎಸ್. ಪಾಟೀಲ ಹೇಳಿದರು. ನಗರದ ಹೊಸ ಬಸ್ ನಿಲ್ದಾಣದಲ್ಲಿ ಜಾತ್ರಾ ಹೆಚ್ಚುವರಿ ಬಸ್ಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಎನ್ಡಬ್ಲು್ಯಕೆಆರ್ಟಿಸಿ ನಿತ್ಯ 50 ಲಕ್ಷ ರೂ. ನಷ್ಟದಲ್ಲಿ ಸಾಗುತ್ತಿದೆ. ಆದರೆ, ಮಾರಿಕಾಂಬಾ ದೇವಿಯ ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ ರಾಜ್ಯದ ವಿವಿಧ ಕಡೆ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಶೇ.10ರಷ್ಟು ದರ ಏರಿಕೆಯೊಂದಿಗೆ ವಿಶೇಷ ಬಸ್ಗಳು ಕಾರ್ಯ ನಿರ್ವಹಿಸುತ್ತವೆ ಎಂದರು. ಈ ಬಾರಿ ಪೊಲೀಸರು ಸೂಚಿಸಿದ ಮಾರ್ಗದಲ್ಲಿ ಸಾರಿಗೆ ಸಂಸ್ಥೆ ಬಸ್ ಸಂಚರಿಸಲಿವೆ. ಒಂದೊಮ್ಮೆ ಸಂಸ್ಥೆಯ ಸಿಬ್ಬಂದಿಗೆ ಈ ಮಾರ್ಗಗಳಲ್ಲಿ ಬಸ್ ಚಾಲನೆಗೆ ಸಮಸ್ಯೆಯಾದರೆ ಈ ಮೊದಲಿನ ಮಾರ್ಗದಲ್ಲೇ ಬಸ್ಗಳು ಸಂಚರಿಸಲಿವೆ ಎಂದರು. ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ, ಪ್ರಮುಖರಾದ ರಾಜೇಶ ಶೆಟ್ಟಿ, ವಿಜು ಭಟ್ಟ ಇತರರಿದ್ದರು.
ಆತಂಕ ಪಡುವ ಅವಶ್ಯಕತೆ ಇಲ್ಲ
ಜಾತ್ರೆಗಾಗಿ ಜಿಲ್ಲೆಯ ಹೊರಗಿನ ವಿಭಾಗಗಳಿಂದ ಬಸ್ ತರಿಸಲಾಗಿದೆ. ಇದರಿಂದ ಸ್ಥಳೀಯ ರೂಟ್ ಬಸ್ಗಳನ್ನು ಬಳಸಿಕೊಳ್ಳಲಾಗುವುದಿಲ್ಲ. ಹಾಗೊಮ್ಮೆ ಬಸ್ಗಳು ಬೇಕಾದಲ್ಲಿ ಲಾಂಗ್ ರೂಟ್ ಬಸ್ ಬಳಸಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಸ್ಥಳೀಯ ಪ್ರಯಾಣಿಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಶಿರಸಿ ಮಾರಿಕಾಂಬಾ ಜಾತ್ರೆಗಾಗಿ ವಿವಿಧ ಭಾಗಗಳಿಂದ ಒಟ್ಟು 115 ಬಸ್ಗಳನ್ನು ತರಿಸಲಾಗಿದೆ. ಎನ್ಡಬ್ಲ್ಯುಕೆಆರ್ಟಿಸಿಯ ಬಾಗಲಕೋಟೆ, ಬೆಳಗಾವಿ ಹೀಗೆ ವಿವಿಧ ವಿಭಾಗಗಳಿಂದ ಕೆಲವು ಬಸ್ ತರಿಸುವ ಜತೆಗೆ ಹೊಸ ಬಸ್ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಭಟ್ಕಳ, ಕುಂದಾಪುರ, ಹಾವೇರಿ, ತಾಳಗುಪ್ಪ ಹೀಗೆ ಬೇಡಿಕೆಗೆ ತಕ್ಕಂತೆ ರಾಜ್ಯದ ವಿವಿಧೆಡೆಯಿಂದ ಜಾತ್ರಾ ವಿಶೇಷ ಬಸ್ಗಳನ್ನು ಬಿಡಲಾಗುವುದು ಎಂದು ಎನ್ಡಬ್ಲ್ಯುಕೆಆರ್ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.