ವದಂತಿ ಹಬ್ಬಿಸಿದ ಕೈ ನಾಯಕನ ಬಂಧನ:ಸಂತೋಷ್‌ನನ್ನು ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಪ್ರತಿಭಟನೆ

9CBP2
Published on

ಚಿಕ್ಕಬಳ್ಳಾಪುರ: ಆರೋಗ್ಯ ಶಿಬಿರದ ಬಗ್ಗೆ ವದಂತಿ ಹಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಪಕ್ಷೀಯ ನಾಯಕ ಸಂತೋಷ್ ಬಂಧನ ಖಂಡಿಸಿ, ಕಾಂಗ್ರೆಸ್ ನಾಯಕರು ಸೋಮವಾರ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿ, ಪೊಲೀಸರ ಏಕಪಕ್ಷೀಯ ವರ್ತನೆಯ ವಿರುದ್ಧ ಧಿಕ್ಕಾರಗಳನ್ನು ಕೂಗಿ, ನ್ಯಾಯ ಒದಗಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಜಿಲ್ಲೆಯಲ್ಲಿ ಪ್ರಭಾವಿ ಸಚಿವರ ಒತ್ತಡಕ್ಕೆ ಮಣಿದು ಸುಳ್ಳು ಪ್ರಕರಣಗಳ ದಾಖಲಿಸುವಿಕೆ, ಎದುರಾಳಿ ಪಕ್ಷಗಳ ನಾಯಕರ ಬಂಧನದ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಆಡಳಿತ ಯಂತ್ರಾಂಗ ಕೈ ಗೊಂಬೆಯಂತೆ ವರ್ತಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಆರೋಪಿಸಿದರು.

ಎಚ್ಚರಿಕೆ ನೀಡಿ ವಾಪಸ್ ಕಳುಹಿಸುವ ಇಲ್ಲವೇ ಸ್ಟೇಷನ್ ಬೇಲ್ ನೀಡುವ ವದಂತಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕನನ್ನು ಬಂಧಿಸಲಾಗಿದೆ. ಆದರೆ, ಇಲ್ಲಿನ ಠಾಣೆಗೆ ವೆಂಕಟ್ ಎಂಬುವರು ಜಾತಿ ನಿಂದನೆಯ ದೂರನ್ನು ಸಲ್ಲಿಸಿದರೂ ಪರಿಶೀಲಿಸುವ ನೆಪದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಎನ್.ಸಿ.ವೆಂಕಟೇಶ್, ರಾಜ್ಯ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಜಿಪಂ ಮಾಜಿ ಅಧ್ಯಕ್ಷರಾದ ಎಂ.ವಿ.ಕೃಷ್ಣಪ್ಪ, ಮುನೇಗೌಡ, ಮುಖಂಡರಾದ ಲಾಯರ್ ನಾರಾಯಣಸ್ವಾಮಿ, ಹನುಮಂತಪ್ಪ, ಪ್ರೆಸ್ ಸುರೇಶ್ ಮತ್ತಿತರರು ಭಾಗವಹಿಸಿದ್ದರು.

ಪ್ರಕರಣದ ಹಿನ್ನೆಲೆ: ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿರುವ ಬೃಹತ್ ಆರೋಗ್ಯ ಶಿಬಿರಕ್ಕೆ ಕ್ಷೇತ್ರದ ಜನರ ರಕ್ತ ಪರೀಕ್ಷೆ ವಿಚಾರವಾಗಿ, ಕೆರೆಗಳಿಗೆ ಪೂರೈಸಲಾದ ಸಂಸ್ಕರಿಸಿದ ಎಚ್.ಎನ್.ವ್ಯಾಲಿಯ ಕೊಳಚೆ ನೀರಿನ ಸೇವನೆ ಹಿನ್ನೆಲೆಯಲ್ಲಿ ಜನರ ಆರೋಗ್ಯ ಹದಗೆಡುತ್ತಿರುವುದರಿಂದ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಸಂತೋಷ್ ವದಂತಿ ಹಬ್ಬಿಸುತ್ತಿದ್ದಾನೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ನಿರ್ವಾಹಕ ಅನಿಲ್ ಎಂಬುವವರು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತ ಪಕ್ಷದ ನಾಯಕರು ಸಲ್ಲಿಸಿದ ದೂರುಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಆದರೆ, ಜನ ಸಾಮಾನ್ಯರು ನೀಡುವ ಪ್ರಕರಣಗಳಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಚರ್ಚೆಗೆ ಗ್ರಾಸವಾದ ಖಾಕಿ ನಡೆ: ರಾಜಕೀಯ ವ್ಯಕ್ತಿಗಳ ಗುದ್ದಾಟದ ನಡುವೆ ಪ್ರಕರಣಗಳು ದಾಖಲಿಸುವಿಕೆಯಲ್ಲಿನ ಪೊಲೀಸ್ ಇಲಾಖೆಯ ಅಧಿಕಾರಿಗಳ ಕಾರ್ಯ ವೈಖರಿಯು ಚರ್ಚೆಗೆ ಗ್ರಾಸವಾಗಿದೆ. ವಿವಾದಿತ ಪ್ರಕರಣಕ್ಕೆ ಸಂಬಂಧಿಸಿ ನಿಯಮಗಳ ಪಾಲನೆಯಲ್ಲಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವು ದಿಕ್ಕು ತಪ್ಪಿಸುತ್ತಿದ್ದು, ಪರಸ್ಪರ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಇತ್ತೀಚೆಗೆ ಬಾಬು ಜಗಜೀವನರಾಮ್ ಜಯಂತಿ ಆಚರಣೆ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ಶಿವಾನಂದ, ಅನಸೂಯಮ್ಮ ನಟರಾಜನ್, ಎಸ್.ಎಂ.ಮುನಿಯಪ್ಪ ಸೇರಿ ಹಲವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಗೆ ಮುಂದಾದ ಸಂದರ್ಭದಲ್ಲಿ ಪೊಲೀಸರು ತಡೆದು ಪ್ರಕರಣ ದಾಖಲಿಸಿದ್ದರು. ಬಳಿಕ ದಲಿತಪರ ಸಂಘಟನೆಗಳು ಹೋರಾಟಕ್ಕೆ ಕರೆ ನೀಡುತ್ತಿದ್ದಂತೆ ಬಿ ರಿಪೋರ್ಟ್ ಸಲ್ಲಿಸಿ, ವಿವಾದಕ್ಕೆ ತೆರೆ ಎಳೆದಿದ್ದರು. ಇದಕ್ಕೂ ಆಡಳಿತ ಪಕ್ಷದ ನಾಯಕರ ಸಲಹೆಯೇ ಕಾರಣ ಎನ್ನಲಾಗಿದೆ. ಇನ್ನು ಹಿಂದೆ ಚುನಾವಣಾ ಪ್ರಚಾರ, ಸಭೆ ಮತ್ತು ಸಮಾರಂಭ, ರ‌್ಯಾಲಿ ವಿಚಾರಗಳಲ್ಲೂ ಏಕಪಕ್ಷೀಯ ವರ್ತನೆಯ ಬಗ್ಗೆ ಆರೋಪಗಳು ಹಲವು ಬಾರಿ ಕೇಳಿ ಬಂದಿವೆ.

ವದಂತಿ ಹಬ್ಬಿಸಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಸಂತೋಷ್‌ನನ್ನು ಬಂಧಿಸಲಾಗಿದೆ. ನಿಯಮಾನುಸಾರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net