

ಯಳಂದೂರು: ತಾಲೂಕಿನ ವಡಗೆರೆ ಬಿದ್ದ ಆಂಜನೇಯಸ್ವಾಮಿ ಬೆಟ್ಟದ ಸಮೀಪದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದು, ಬೋನು ಹಾಗೂ ಕ್ಯಾಮರಾ ಟ್ರ್ಯಾಪ್ ಅಳವಡಿಸಿದ್ದಾರೆ.
ಆ. 26ರಂದು ಕಬ್ಬು ಕಟ್ಟಾವು ಮಾಡುವ ಕೂಲಿ ಕಾರ್ಮಿಕರು ಚಿರತೆ ಬೆಟ್ಟದ ಮೇಲೆ ಹಾದು ಹೋಗುವುದನ್ನು ಕಂಡಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಬಿಳಿಗಿರಿರಂಗನಬೆಟ್ಟ ರಕ್ಷಿತಾರಣ್ಯ ಸಮೀಪ ಇರುವುದರಿಂದ ಚಿರತೆ ಬಂದು ಹೋಗಿರಬಹುದೆಂದು ಊಹಿಸಿದ್ದಾರೆ. ಆದರೂ ಸಮೀಪದಲ್ಲಿ ವಸತಿ ಶಾಲೆ, ದೇಗುಲ, ತೋಟದ ಮನೆಗಳು ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಬೆಟ್ಟದಲ್ಲಿ ಬೋನು, ಕ್ಯಾಮರಾ ಟ್ರಾೃಪ್ ಅಳವಡಿಸಿದ್ದು, ಚಿರತೆ ಸೆರೆಗೆ ಕ್ರಮ ಕೈಗೊಂಡಿದ್ದಾರೆ.
ವಸತಿಶಾಲೆಗೆ ಅರಣ್ಯ ಸಿಬ್ಬಂದಿ ಗಸ್ತು : ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆ ಸಮೀಪದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಾಲೆಯ ನೂರಾರು ವಿದ್ಯಾರ್ಥಿನಿಯರು ತಿಂಡಿ, ಊಟದ ಸಮಯದಲ್ಲಿ ಭೋಜನಾಲಾಯಕ್ಕೆ ಹಾಗೂ ಸಭಾಂಗಣಕ್ಕೆ ಹೋಗುವಾಗ ಅವರ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಅವರು ವಸತಿ ಕೊಠಡಿಗೆ ಹೋಗುವವರೆಗೂ ಬಂದೋಬಸ್ತ್ ಮಾಡಲಾಗಿದೆ ಎಂದು ಡಿಆರ್‌ಎಫ್‌ಒ ಪುನೀತ್ ಕುಮಾರ್ ಮಾಹಿತಿ ನೀಡಿದರು.