

ಬಸವಕಲ್ಯಾಣ: ಕೂಡಲಸಂಗಮ ಬಸವಧರ್ಮ ಪೀಠದ ಪೂಜ್ಯ ಲಿಂ. ಡಾ. ಮಾತೆ ಮಹಾದೇವಿ ಅವರು ಬರೆದಿರುವ ತಮ್ಮ ಜೀವಿತದ ಕೊನೆಯ 'ವಚನಾಮೃತ ವ್ಯಾಖ್ಯಾನ' ಕೃತಿಯನ್ನು ಇಲ್ಲಿನ ಜಿಕೆ (ಗುರುನಾಥ ಕೊಳ್ಳುರ್) ಫೌಂಡೇಷನ್ ಪ್ರಕಟಿಸಲು ನಿರ್ಧರಿಸಿದೆ.
ಕಲ್ಯಾಣ ಪರ್ವದಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ಜಿಕೆ ಫೌಂಡೇಷನ್ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್, ವಚನಾಮೃತ ವ್ಯಾಖ್ಯಾನ ಪುಸ್ತಕದ ಮೊದಲ ಮುದ್ರಣದ ಒಂದು ಸಾವಿರ ಪ್ರಕಟಣೆಗಾಗಿ 4 ಲಕ್ಷ ರೂ. ದೇಣಿಗೆ ನೀಡಿದರು.
ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಡಾ.ಗಂಗಾದೇವಿ ಅವರು ಕೊಳ್ಳುರ್ ಉದಾರ ದೇಣಿಗೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಬಹಳ ದಿನಗಳಿಂದ ಈ ಪುಸ್ತಕ ಮುದ್ರಣ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತ್ತು. ಸದ್ಯ ಅಚ್ಚು ಸಿದ್ಧವಾಗಿದೆ. ಶೀಘ್ರ ಪ್ರಕಟಿಸಿ, ಬರುವ ಶರಣ ಮೇಳದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದರು.
ಮಾತಾಜಿ ಅವರು ಬಹಳ ಅಧ್ಯಯನ ಮಾಡಿ ಈ ಕೃತಿ ಬರೆದಿದ್ದು, ಸಮಾಜಕ್ಕೆ ಉತ್ತಮ ಸಂದೇಶ ಸಾರಲಿದೆ. ವಚನಗಳ ಸಾರ ಸಾರ್ವಜನಿಕರಿಗೆ ಇನ್ಮಷ್ಟು ಸರಳವಾಗಿ ತಿಳಿಸಲಿದೆ. ಈ ಪುಸ್ತಕ ಸುಮಾರು ಒಂದು ಸಾವಿರ ಪುಟದಷ್ಟಿದೆ ಎಂದು ಹೇಳಿದರು. ಪುಸ್ತಕ ಮುದ್ರಣಕ್ಕೆ ದೇಣಿಗೆ ನೀಡಿದ ಕೊಳ್ಳುರ್ ಅವರಿಗೆ ಈ ವೇಳೆ ಗೌರವಿಸಲಾಯಿತು.