ವಚನಗಾರ್ತಿ ಅಕ್ಕಮಹಾದೇವಿ ಸೀಕುಲದ ಹೆಮ್ಮೆ

Published on

ಚಾಮರಾಜನಗರ: ಸುಮಾರು 12 ನೇ ಶತಮಾನದ ಹಿಂದೆಯೇ ಮಹಿಳೆಯರ ಸಮಾನತೆ ಕುರಿತು ಹೋರಾಟ ಮಾಡಿದ ಕನ್ನಡದ ಪ್ರಥಮ ಕವಯಿತ್ರಿ ಅಕ್ಕ ಮಹಾದೇವಿ ಸೀ ಕುಲದ ಹೆಮ್ಮೆಯಾಗಿದ್ದಾರೆ ಎಂದು ಮಾಜಿ ಶಾಸಕಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷೆ ಪರಿಮಳ ನಾಗಪ್ಪ ಹೇಳಿದರು.

ನಗರದ ವರನಟ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡದ ಪ್ರಥಮ ಕವಯಿತ್ರಿ ಅಕ್ಕ ಮಹಾದೇವಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಥಮ ವಚನಗಾರ್ತಿ ಅಕ್ಕಮಹಾದೇವಿ ಅವರು 12ನೇ ಶತಮಾನದಲ್ಲಿ ಚೆನ್ನಮಲ್ಲಿಕಾರ್ಜುನನ ಹರಸಿ ಕಾಡು-ಮೇಡುಗಳನ್ನು ಅಲೆಯುತ್ತಾ ದೈವಿವ್ಯಕ್ತಿಯಾದರು. 900 ವರ್ಷಗಳು ಕಳೆದರೂ ಅಕ್ಕ ಮಹಾದೇವಿ ಅವರನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಿರುವುದು ನಮ್ಮ ಸಮಾಜದ ಹೆಮ್ಮೆಯಾಗಿದೆ. ಈ ಕಾರಣಕ್ಕೆ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳಾಗಿದ್ದಾರೆ ಎಂದರು.

ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶಗಳನ್ನು ನೀಡಿದ್ದರು. ನಮ್ಮ ಸಮುದಾಯದ ಹೆಣ್ಣು ಮಕ್ಕಳಿಗೆ ರಾಜಕೀಯ ಮತ್ತು ಸಾಮಾಜಿಕವಾಗಿ ಸಮಾನ ಅವಕಾಶ ಮತ್ತು ಪ್ರೋತ್ಸಾಹ ನೀಡಬೇಕಿದೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ.ಶ್ವೇತಾ ಶಶಿಧರ್ ಮಾತನಾಡಿ, ಹುಟ್ಟಿನಿಂದ ಸಾವಿನವರೆಗೂ ಹೆಣ್ಣಿನ ಸ್ಥಾನ ಮಹತ್ವದ್ದಾಗಿದೆ. ಅಂತಹ ಸ್ತ್ರೀ ಸಮಾನತೆಗಾಗಿ ಹೋರಾಡಿದ ಅಕ್ಕಮಹಾದೇವಿ ಅವರ ಸ್ಮರಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಜೆಎಸ್‌ಎಸ್ ಸಂಸ್ಕೃತ ಕಾಲೇಜು ನಿವೃತ್ತ ಪ್ರಾಂಶುಪಾಲೆ ಡಾ.ಸುನಂದ ಭೂಪಾಲಿ, ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಕೇಂದ್ರ ಸಮಿತಿ ಸದಸ್ಯರಾದ ಎನ್‌ರಿಚ್ ಮಹದೇವಸ್ವಾಮಿ, ರೂಪ ಆರ್.ಶೇಖರ್, ರಾಜ್ಯ ಸಮಿತಿ ಸದಸ್ಯ ಸುರೇಂದ್ರ, ತಾಲೂಕು ಅಧ್ಯಕ್ಷರಾದ ಸುಧಾ ಮಲ್ಲಣ್ಣ, ಎಸ್.ಜಗದಾಂಬ, ಸುಮಾವತಿ, ಬಿ.ಬಾಲಚಂದ್ರಮೂರ್ತಿ, ರವಿ, ಪುಟ್ಟಣ್ಣ, ಎಸ್.ರಮ್ಯ, ಕಾರ್ಯದರ್ಶಿ ವಾಣಿ ರಮೇಶ್ ಹಾಗೂ ಇತರರು ಹಾಜರಿದ್ದರು.

ಮಹಿಳೆಯರಿಂದಲೇ ಅನುಭವ ಮಂಟಪ ನಾಟಕ:

ಅಕ್ಕ ಮಹಾದೇವಿರವರ ಜಯಂತಿಯ ಅಂಗವಾಗಿ ಮಹಾಸಭಾ ಮಹಿಳಾ ಘಟಕದ ವತಿಯಿಂದ ಅನುಭವ ಮಂಟಪ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಅಲ್ಲಮಪ್ರಭು ಪಾತ್ರಧಾರಿಯಾಗಿ ಅನ್ನಪೂರ್ಣ, ಅಕ್ಕಮಹಾದೇವಿಯಾಗಿ ನಾಗು ರಮೇಶ್, ಅಂಬಿಗರ ಚೌಡಯ್ಯನಾಗಿ ಎಸ್.ಉಷಾರಾಣಿ, ಮಡಿವಾಳ ಮಾಚಯ್ಯನಾಗಿ ಲಲಿತಾ, ಮಹಾದೇವಿಯಾಗಿ ಮಲ್ಲಿಗೆ, ಚನ್ನಬಸವಣ್ಣವಾಗಿ ಆಶಾ, ಬಸವಣ್ಣನಾಗಿ ಪುಷ್ಪಲತಾ, ಸಿದ್ದರಾಮೇಶ್ವರರಾಗಿ ಡಾ.ಸಹನ, ನೀಲಾಂಭಿಕೆಯಾಗಿ ಎಂ.ಶೈಲಜಾ, ಗಂಗಾಂಭಿಕೆಯಾಗಿ ಮಹೇಶ್ವರಿ, ಅಕ್ಕ ನಾಗಲಾಂಭಿಕೆಯಾಗಿ ಲತಾ ಜಯಣ್ಣ, ಜೇಡರ ದಾಸೀಮಯ್ಯನಾಗಿ ಅಂಬುಜಾ, ಸತ್ಕಕ್ಕಳಾಗಿ ರೂಪಶ್ರೀ, ದುಗ್ಗಲೆಯಾಗಿ ಪುಟ್ಟತಾಯಮ್ಮ, ಲಿಂಗಮ್ಮಳಾಗಿ ಅಂಬಿಕಾ ಹಾಗೂ ಗೊಗ್ಗಲೆಯಾಗಿ ಕಲಾವತಿ ಅತ್ಯುತ್ತಮವಾಗಿ ಅಭಿನಯ ಮಾಡಿದರು.

ಅಕ್ಕಮಹಾದೇವಿ ಪ್ರಪಂಚದಲ್ಲೇ ಸ್ತ್ರೀ ಸಮಾನತೆಗಾಗಿ ಹೋರಾಡಿದ ಪ್ರಥಮ ಮಹಿಳೆ ಎಂದರೆ ತಪ್ಪಾಗಲಾರದು. ನಮ್ಮ ದೇಶದ ಚರಿತ್ರೆಯಲ್ಲಿ ಅಕ್ಕ ಮಹಾದೇವಿ ಅವರ ಸ್ಥಾನ ಪ್ರಮುಖವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಅಕ್ಕ ಮಹಾದೇವಿ ಅವರ ಚಿಂತನೆಗಳು ನಮಗೆ ಆದರ್ಶವಾಗಬೇಕು.

-ಡಾ.ಗೀತಾ ಮಹದೇವಪ್ರಸಾದ್, ಮಾಜಿ ಸಚಿವೆ, ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net