

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುರುಘಾಮಠದ ದಾಸೋಹಕ್ಕೆ ಶತಮಾನದ ಇತಿಹಾಸವಿದೆ. ಬಸವಣ್ಣನವರ ತತ್ವ ಅಳವಡಿಸಿಕೊಂಡು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವ ಮುರುಘಾಮಠ ನಾಡಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಮುರುಘಾಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಜಾತಿ ವ್ಯವಸ್ಥೆ ಹೋಗಲಾಡಿಸಲು ಬಸವಾದಿ ಶರಣರು ಸಾಕಷ್ಟು ಶ್ರಮಿಸಿದ್ದಾರೆ. ಸ್ವಾತಂತ್ರೃ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದೇಶ ಆಧುನಿಕತೆಯಲ್ಲಿ ಜಗತ್ತಿನಲ್ಲೇ ಮುಂದುವರಿದಿದೆ. ಅಲ್ಲದೆ ಆರ್ಥಿಕ ವ್ಯವಸ್ಥೆಯಲ್ಲಿ ಐದನೇ ಸ್ಥಾನದಲ್ಲಿದೆ. ಇಷ್ಟೆಲ್ಲ ಆದರೂ ಸಮುದಾಯದಲ್ಲಿ ಪ್ರೀತಿ, ವಿಶ್ವಾಸ, ನೆಮ್ಮದಿ ಇಲ್ಲ. ಹೀಗಾಗಿ ಶ್ರಾವಣ ಮಾಸದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರು ಪಾಲ್ಗೊಳ್ಳಬೇಕು. ಈ ಮೂಲಕ ಧಾರ್ಮಿಕ ಚಿಂತನೆಗಳನ್ನು ಮಾಡುವ ಮೂಲಕ ಭಾವನೆಗಳನ್ನು ಬದಲಾಯಿಸಿಕೊಳ್ಳಬೇಕು ಎಂದರು.
ಎಲ್ಲ ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಇತ್ತೀಚಿನ ದಿನಗಳಲ್ಲಿ ವ್ಯಕ್ತಿಗಳನ್ನು ಜಾತಿ ಮೇಲೆ ಅಳೆಯಲಾಗುತ್ತಿದೆ. ಬಸಣ್ಣನವರ ವಚನಗಳ ಆಧಾರದಲ್ಲಿ ಮಾತ್ರ ಒಳ್ಳೆ ಸಮಾಜ ನಿರ್ಮಾಣ ಸಾಧ್ಯ. ಸಮಾಜ ಬದಲಾಗಬೇಕಾದರೆ, ಮೊದಲು ನಾವು ಬದಲಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವುದು ಎಲ್ಲವೊ ಸತ್ಯವಲ್ಲ. ಅವುಗಳಿಗೆ ಜನರು ಮರುಳಾಗಬಾರದು ಎಂದರು.
ಮುಮ್ಮಿಗಟ್ಟಿಯ ಡಾ. ಬಸವಾನಂದ ಸ್ವಾಮೀಜಿ ಪ್ರವಚನ ನೀಡಿದರು. ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದ ಶ್ರೀ ಸದಾಶಿವ ಸ್ವಾಮೀಜಿ, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎನ್.ಎಸ್. ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ವಿ.ಎಂ. ಕಟಗಿ, ಎಸ್.ಎನ್. ಹಂಪಣ್ಣವರ, ಎಸ್.ಎಸ್. ಲಕ್ಷ್ಮೇಶ್ವರ, ಸಿ.ಎಸ್. ಪಾಟೀಲ, ಇತರರು ಇದ್ದರು.