ವಚನಗಳಲ್ಲಿದೆ ಬದುಕಿನ ಸಾರ

6Jaggu1
ಬೆಳಗಾವಿ ಖಾಸಬಾಗ್‌ನ ಬಸವೇಶ್ವರ ವೃತ್ತದಿಂದ ವಡಗಾವಿ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ದೇವರ ದಾಸಿಮಯ್ಯ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಚಾಲನೆ ನೀಡಿದರು. ಸಾಹಿತಿ ಡಾ. ಬಸವರಾಜ ಜಗಜಂಪಿ, ಪಾಲಿಕೆ ಸದಸ್ಯರಾದ ದೀಪಾಲಿ ಟೋಪಗಿ, ರೇಷ್ಮಾ ಕಾಮಕಾರ, ಪ್ರೀತಿ ಕಾಮಕಾರ ಇತರರಿದ್ದರು.
Published on

ಬೆಳಗಾವಿ: ಜೀವನದ ಪ್ರತಿಯೊಂದು ಹಂತವನ್ನು ಶರಣರು ವಚನ ಸಾಹಿತ್ಯದಲ್ಲಿ ಸವಿಸ್ತಾರವಾಗಿ ಹಾಗೂ ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ಸಾರ್ಥಕ ಬದುಕಿನ ಸಾರವೆಲ್ಲವೂ ವಚನ ಸಾಹಿತ್ಯದಲ್ಲಿ ಅಡಗಿದೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ವಡಗಾವಿ ಚಾವಡಿ ಗಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ದೇವರ ದಾಸಿಮಯ್ಯರು ಕಲಬುರ್ಗಿ ಜಿಲ್ಲೆ ಮುದೇನೂರು ರಾಮಯ್ಯ ಮತ್ತು ಶಂಕರಮ್ಮ ದಂಪತಿ ಮಗನಾಗಿ ಸಾಮಾನ್ಯ ಕುಟುಂಬದಲ್ಲಿ ಜನಸಿದರು. ಅವರು ವಚನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಿವನಿಗೆ ವಸ್ತ್ರವನ್ನು ಕೊಟ್ಟಿರುವುದರಿಂದ ದಾಸಿಮಯ್ಯರಿಗೆ ದೇವರ ದಾಸಿಮಯ್ಯ ಎಂಬ ಹೆಸರು ಬಂದಿದೆ. ದಾಸಿಮಯ್ಯ ಸಮುದಾಯವನ್ನು ದಾಸಿಮಾರ್ಯರು ಎಂದು ಕರೆಯುತ್ತಿದ್ದರು. ದಾಸಿಮಾರ್ಯರು ಎಂದರೆ ಹಿರಿಯ, ದೊಡ್ಡವರು ಎನ್ನುವ ಅರ್ಥ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ನಿರೂಪಿಸಿದರು. ಮಹಾನಗರ ಪಾಲಿಕೆಯ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ ವಂದಿಸಿದರು. ಸತ್ಯನಾರಾಯಣ ಭಟ್ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಮೆರವಣಿಗೆ: ಅದಕ್ಕೂ ಮುನ್ನ ಖಾಸಬಾಗ್‌ನ ಶ್ರೀ ಬಸವೇಶ್ವರ ವೃತ್ತದಿಂದ ದೇವರ ದಾಸಿಮಯ್ಯ ಅವರ ಭಾವಚಿತ್ರದೊಂದಿಗೆ ಹಲವು ಕಲಾ ತಂಡಗಳಿಂದ ಭವ್ಯ ಮೆರವಣಿಗೆ ಜರುಗಿತು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಬೆಳಗಾವಿಯ ವಡಗಾವಿ ಚಾವಡಿ ಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣಕ್ಕೆ ಆಗಮಿಸಿತು. ಬಳಿಕ ವೇದಿಕೆ ಕಾರ್ಯಕ್ರಮ ಜರುಗಿತು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಸದಸ್ಯರಾದ ದೀಪಾಲಿ ಟೋಪಗಿ, ರೇಷ್ಮಾ ಕಾಮಕಾರ, ಪ್ರೀತಿ ಕಾಮಕಾರ, ಸಮಾಜದ ಮುಖಂಡ ವೆಂಕಟೇಶ ವನಹಳ್ಳಿ, ಪರಶುರಾಮ ಢಗೆ, ನಾರಾಯಣ ಕುಲಗೋಡ, ಅಶೋಕ ಹಣಬರಟ್ಟಿ, ಗುರುಸಿದ್ದಪ್ಪ ತಿಗಡಿ, ಮಾರುತಿ ಬಂಗೋಡಿ, ಬಸವರಾಜ ಜಡಫಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net