

ಹಾಸನ: 12ನೇ ಶತಮಾನದಲ್ಲೆ ಶ್ರೀ ಬಸವೇಶ್ವರರು ಇಡೀ ಜಗತ್ತಿಗೆ ಉತ್ತಮ ಸಂದೇಶವನ್ನು ಸಾರಿದ್ದರು. ಜಾತಿ ತಾರತಮ್ಯ ಮತ್ತು ಅಂದಕಾರದಲ್ಲಿ ಮುಳುಗಿದಂತಹ ಸಮಾಜವನ್ನು ಬೆಳಕಿನತ್ತ ಕೊಂಡೂಯ್ಯಲು ಹಾಗೂ ಮನುಷ್ಯ ಮನುಷ್ಯನನ್ನು ಗೌರವಿಸಬೇಕೆ ಹೊರತು ಜಾತಿಯಿಂದಲ್ಲ ಹೇಳಿ ಜನರಿಗೆ ಅರಿವು ಮೂಡಿಸಿದವರು ಎಂದು ಅಖಿಲ ಭಾರತ ವೀರಶೈವ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ ಅವರು ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಇಂದು ಪ್ರಪಂಚದ ಅನೇಕ ರಾಷ್ಟ್ರಗಳು ಬಸವಣ್ಣನ ಆದರ್ಶವನ್ನು ಪಾಲನೆ ಮಾಡಿಕೊಂಡು ಬರುತ್ತಿವೆ. ಇಂದಿನ ನಮ್ಮ ಬೃಹತ್ ಸಂವಿಧಾನ ರಚನೆಗೆ ಬಸವಣ್ಣನವರ 12ನೇ ಶತಮಾನದಲ್ಲಿ ತೋರಿಸಿಕೊಟ್ಟ ಅನುಭವ ಮಂಟಪವೇ ಮೂಲವಾಗಿದೆ ಎಂದು ತಿಳಿಸಿದರು.
ಅನೇಕರಿಗೆ ಶಿಕ್ಷಣದ ಅರಿವು ಇಲ್ಲದಿದ್ದ ವೇಳೆ ಬಸವಣ್ಣ ವಚನಗಳ ಮೂಲಕ ಜಾತ್ಯತೀತತೆಯ ಮನೋಭಾವ ಮೂಡಿಸಿದರು. ಜನರಲ್ಲಿದ್ದ ಕೀಳು ಭಾವನೆಯನ್ನು ಹೋಗಲಾಡಿಸಿ ನಾವೆಲ್ಲಾ ಒಂದೆ ಎನ್ನುವ ಮನೋಭಾವವನ್ನು ತಂದವರು. 12ನೇ ಶತಮಾನದಲ್ಲಿ ದೊಡ್ಡ ಅನುಭವ ಮಂಟಪವನ್ನು ಕಟ್ಟಿದವರು. ಅವರ ಆದರ್ಶವನ್ನು ನಾವು ನೀವು ಪಾಲಿಸಿ ಸದೃಢ ಸಮಾಜ ಕಟ್ಟೋಣ. ಬಸವಣ್ಣನವರ ತತ್ವ ಸಿದ್ಧಾಂತವನ್ನು ಮನೆಗೆ ಮನೆಗೆ ತಿಳಿಸೋಣ ಎಂದು ಕರೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, ಚುನಾವಣೆಯ ನೀತಿ ಸಂಹಿತೆ ಹಿನ್ನಲೆಯಲ್ಲಿ ಬಸವೇಶ್ವರ ಜಯಂತಿಯನ್ನು ಸರಳವಾಗಿ ಆಯೋಜಿಸಲಾಗಿದೆ. ನಾಡಿನಾದ್ಯಂತ ಶ್ರೀ ಬಸವೇಶ್ವರ ಜಯಂತಿಯನ್ನು ಶ್ರದ್ಧೆ- ಭಕ್ತಿಯಿಂದ ಆಚರಣೆ ಮಾಡಲಾಗುತ್ತಿದ್ದು, ಎಲ್ಲಾ ಸಮಾಜ ಬಾಂಧವರು ಸೇರಿ ಬಸವ ಜಯಂತಿ ಆಚರಣೆಯನ್ನು ಮಾಡುತ್ತಿದ್ದಾರೆ. ಬಸವಣ್ಣನವರು ಅಂದಿನ ಸಂದರ್ಭದಲ್ಲಿಯೇ ಎಲ್ಲ ಜನಾಂಗ, ಜಾತಿಯನ್ನು ತೊಡೆದುಹಾಕಿ ಸಮಾನತೆ ಸಮಾಜ ಕಟ್ಟಿದವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಉದಯಕುಮಾರ್, ಸ್ವಾತಂತ್ರೃ ಹಿರಿಯ ಹೋರಾಟಗಾರರಾದ ಎಚ್.ಎಂ. ಶಿವಣ್ಣ, ಸಂಘದ ಉಪಾಧ್ಯಕ್ಷ ಭುವನಾಕ್ಷ, ಕಾರ್ಯದರ್ಶಿ ರುದ್ರಕುಮಾರ್, ಬಸವ ಕೇಂದ್ರದ ಯು.ಎಸ್. ಬಸವರಾಜು, ಜಿಲ್ಲಾ ಪಂಚಾಯಿತಿ ಸಹ ಕಾರ್ಯದರ್ಶಿ ಶ್ರೀನಿವಾಸ್, ವಕೀಲರಾದ ಸುನಿಲ್, ನಿಡುಗನಹಳ್ಳಿ ಸಿದ್ದಪ್ಪ, ವಿಜಯಕುಮಾರ್, ಸೋಮಶೇಖರ್, ಮಹೇಶ್ ಇತರರು ಉಪಸ್ಥಿತರಿದ್ದರು.