ವಚನಗಳ ಮಹತ್ವ ತಿಳಿಸುವ ಕೆಲಸವಾಗಲಿ

25 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಕಾರಣಕ್ಕೆ ಬಸವಣ್ಣನವರ ವಚನಗಳನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಮುಟ್ಟಿಸುವ ಕಾರ್ಯ ಆಗಬೇಕಿದೆ ಎಂದು ಸಾಣೇಹಳ್ಳಿ ತರಳುಬಾಳು ಜಗದ್ಗುರು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ದೇಶದ ಪ್ರಥಮ ವಚನ ಸಂಸ್ಕೃತಿಯ ಅಭಿಯಾನದ ನಿಮಿತ್ತ ಕರ್ನಾಟಕ ವಿಶ್ವ ವಿದ್ಯಾಲಯದ ಶ್ರೀ ಬಸವೇಶ್ವರ ಅಧ್ಯಯನ ಪೀಠವು ಶ್ರೀ ಶಿವಕುಮಾರ ಕಲಾ ಸಂಘದ ಸಹಯೋಗದಲ್ಲಿ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ನಿನಲ್ಲದೇ ಮತ್ತಾರೂ ಇಲ್ಲವಯ್ಯ (ತುಮ್ಹಾರೆ ಸಿವಾ ಔರ ಕೋಯಿ ನಹೀ) ಎಂಬ ಬಸವಣ್ಣನವರ ಆಯ್ದ 44 ವಚನಗಳನ್ನು ಆಧರಿಸಿದ ನೃತ್ಯ ರೂಪಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವಣ್ಣನವರು ಅನುಭವ ಮಂಟಪ ಮೂಲಕ ಅತಿ ದೊಡ್ಡ ಕ್ರಾಂತಿ ಮಾಡಿದ್ದು, ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿದೆ. ಇಂದು ಯುವ ಸಮುದಾಯ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿರುವುದರಿಂದ ತಂತ್ರಜ್ಞಾನ ಮೂಲಕ ವಚನಗಳ ಮಹತ್ವ ತಿಳಿಸುವ ಉದ್ದೇಶವಾಗಿದೆ ಎಂದರು.
ಸಾಹಿತಿ ಡಾ.ವೀರಣ್ಣ ರಾಜೂರ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಜನರ ಮನೆಮನೆಗೆ ತಲುಪಿಸುವಲ್ಲಿ ದೃಶ್ಯ ರೂಪಕ ಬಹಳ ಪ್ರಭಾವ ಬೀರಲಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಕ್ರಾಂತಿ ಮಾಡಿದ್ದು, ವಚನಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶ ಅವರದ್ದಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ಮನುಷ್ಯನ ಜೀವನಕ್ಕೆ ಬೇಕಾಗುವ ವಚನಗಳ ಸಾರವನ್ನು ದೃಶ್ಯ ಮಾಧ್ಯಮದ ಮೂಲಕ ಪ್ರಸ್ತುತ ಪಡಿಸುತ್ತಿರುವುದು ಸಂತಸದ ಸಂಗತಿ. ರಾಜ್ಯದ ಪ್ರತಿ ಹಳ್ಳಿಗೂ ಬಸವಣ್ಣನವರ ವಚನಗಳ ಮಹತ್ವ ಪ್ರಚಾರ ಮಾಡಬೇಕಿದೆ. ಪ್ರಸ್ತುತ ಬಸವಣ್ಣನವರ ಅನೇಕ ವಚನಗಳನ್ನು ಹಲವು ಭಾಷೆಗಳಲ್ಲಿ ಕಾಣಬಹುದು ಎಂದರು.
ಬಿ.ಬಸವನಗೌಡ, ಪ್ರೊ. ಸಿ. ಕೃಷ್ಣಮೂರ್ತಿ, ಡಾ.ಮಲ್ಲಿಕಾರ್ಜುನ ಪಾಟೀಲ, ಕೆ.ಎಂ.ಅಂಗಡಿ, ಪ್ರೊ. ಎ.ಬಿ. ವೇದಮೂರ್ತಿ, ಡಾ. ಈರಣ್ಣ ಇಂಜಗನೇರಿ, ಇತರರು ಇದ್ದರು. ಡಾ. ಸಿ.ಎಂ. ಕುಂದಗೋಳ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net