ವಚನ ಸಾಹಿತ್ಯವಲ್ಲ, ಅದು ಸಾಂಸ್ಕೃತಿಕ ಪರಂಪರೆ: ನಿವೃತ್ತ ನ್ಯಾ.ಅರಳಿ ನಾಗರಾಜ್

22
Published on

ಮೈಸೂರು: ವಚನ ಎನ್ನುವುದು ಕೇವಲ ಸಾಹಿತ್ಯಿಕ ಪ್ರಕಾರವಾಗದೆ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಅರಳಿ ನಾಗರಾಜ್ ಹೇಳಿದರು.

ಶರಣು ವಿಶ್ವ ವಚನ ಫೌಂಡೇಷನ್ ವತಿಯಿಂದ ವಿನಾಯಕನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 56ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತ್ಯ ಪ್ರಕಾರ ಕಾಲಮಿತಿಯುಳ್ಳದ್ದು. ಆದರೆ ಸಾಂಸ್ಕೃತಿಕ ಪರಂಪರೆ ಕಾಲಾತೀತವಾದುದು. ಆದ್ದರಿಂದ 800 ವರ್ಷವಾದರೂ ವಚನಗಳು ಜನಮಾನಸದಲ್ಲಿ ಜೀವಂತವಾಗಿವೆ. ಯಾವುದೇ ವಿಷಯದ ಬಗ್ಗೆ ನಾಲ್ಕು ಅಂಶಗಳಾದ ಆಲಿಸುವಿಕೆ, ಗ್ರಹಿಸುವಿಕೆ, ಅಂಗೀಕರಿಸುವಿಕೆ, ಪಾಲಿಸುವಿಕೆಯನ್ನು ಅನ್ವಯಿಸಿ ತೀರ್ಮಾನಿಸಬೇಕು. ನಾವು ದಕ್ಷತೆ, ಸಚ್ಚಾರಿತ್ರ್ಯ, ಬದ್ಧತೆ, ಧ್ಯೇಯ ಮತ್ತು ಸಹಾನುಭೂತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಭ್ರಷ್ಟಾಚಾರ, ಜಾತೀಯತೆ ಮತ್ತು ಅಪರಾಧಗಳಿಂದ ದೂರವಿರಬೇಕು ಎಂದರು.

ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಕರ್ನಾಟಕದ ಕ್ಷಿತಿಜದ ಮೇಲೆ ಹುಟ್ಟಿದ ಶರಣರು ವಚನಗಳ ಮೂಲಕ ಮಾತಿನ ಮಾಲಿನ್ಯವನ್ನು ನೀಗಿಸಿದರು. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎಂದು ಹೇಳುವ ಮೂಲಕ ಭವಿಯಾಗಿದ್ದ ಭಾಷೆ ಸಾಹಿತ್ಯವನ್ನು ಭಕ್ತನನ್ನಾಗಿಸಿದರು. ಪದಾರ್ಥವಾಗಿದ್ದವುಗಳನ್ನು ಪ್ರಸಾದವನ್ನಾಗಿಸಿದರು. ಆಧ್ಯಾತ್ಮಕ್ಕೆ ಅಲ್ಲಮಪ್ರಭುಗಳ ವಚನಗಳು, ಸಮಾಜ ಧರ್ಮಕ್ಕೆ ಬಸವಣ್ಣನವರ ವಚನಗಳು, ಲಿಂಗಾಯತ ಧರ್ಮಕ್ಕೆ ಬಸವಣ್ಣನವರ ವಚನಗಳು ನಿದರ್ಶನವೆನಿಸಿವೆ. ಧನದಲ್ಲಿ ಸಮಾನತೆ ತರುವ ಉದ್ದೇಶದಿಂದಲೇ ಶರಣರು ಕಾಯಕದಿಂದ ಅಂದು ಗಳಿಸಿದ್ದನ್ನು ಅಂದೇ ವಿನಿಯೋಗಿಸಬೇಕು ಎಂದು ತಿಳಿಸಿ, ನಾಳೆ ಬೇಕೆಂಬ ಸಂಗ್ರಹಕ್ಕೆ ಅವಕಾಶ ನೀಡಲಿಲ್ಲ ಎಂದರು.

33 ವಿದ್ಯಾರ್ಥಿಗಳಿಗೆ ಉಚಿತವಾಗಿ ಬಿಳಿ ಸಮವಸ್ತ್ರ ಹಾಗೂ ವಚನ ವಾಚನ ಮತ್ತು ವಿಶ್ಲೇಷಣೆ ಮಾಡಿದ 20 ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಶಂಸನಾ ಪತ್ರ ಮತ್ತು ವಚನಪುಸ್ತಕ ನೀಡಲಾಯಿತು.
ಫೌಂಡೇಷನ್ ಸಹ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಕಾರ್ಯದರ್ಶಿ ಅನಿತಾ ನಾಗರಾಜ್, ಹಿರಿಯ ವಕೀಲ ರವಿಕುಮಾರ್, ನಾಗರಾಜು, ಮುಖ್ಯಶಿಕ್ಷಕಿ ಕೆ.ಪಿ. ಕಮಲಮ್ಮ, ಶಿಕ್ಷಕರಾದ ರೂಪಾ, ಸುಜಾತ, ಸುಮಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net