

ಚಾಮರಾಜನಗರ: ವಚನ ಸಾಹಿತ್ಯಕ್ಕೆ ಬಸವಣ್ಣನವರೇ ಮೂಲವಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ವಚನದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಿದೆ ಎಂದು ಶರಣ ಸಾಹಿತಿ ದೇವರಾಜು ಪಿ.ಚಿಕ್ಕಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಶ್ರೀಮುರುಘರಾಜೇಂದ್ರಸ್ವಾಮಿ ಮಠದ ಶ್ರೀಬಸವ ವಿದ್ಯಾಪೀಠ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗುರುಬಸವ ವಚನಪಾಠಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಚನ ಪಾಠಶಾಲೆಯನ್ನು ಅಧ್ಯಯನಕ್ಕೆ ಅಷ್ಟೇ ಅಲ್ಲ, ವಚನಗಳಲ್ಲಿರುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಅಗತ್ಯವಾಗಿದೆ. ವಚನ ಸಾಹಿತ್ಯದ ಮೂಲ ಪುರುಷ ಮತ್ತು ವಚನದ ಬೇರು ಬಸವಣ್ಣ ಅವರನ್ನು ಮರೆಯಬಾರದು. ವಚನ ಪಾಠಶಾಲೆಯಲ್ಲಿ ಕಲಿತ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಸಂಸ್ಕೃತ ಸಮಾಜಕ್ಕೆ ಪಾಲುದಾರರಾಗಬೇಕು ಎಂದರು. ವಚನ ಪಾಠಶಾಲೆಯನ್ನು ದಕ್ಷಿಣ ಕರ್ನಾಟಕದಲ್ಲೇ ಸ್ಥಾಪನೆ ಮಾಡಿದ ಮೊದಲ ಶಾಲೆ ಎಂಬ ಕೀರ್ತಿ ಮರಿಯಾಲ ಶ್ರೀಮಠಕ್ಕೆ ಸಲ್ಲುತ್ತದೆ. ಇದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಈ ಮೂಲಕ ವಚನ ಪರಂಪರೆ ಮತ್ತಷ್ಟು ಮುಂದುವರಿಯಲಿ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ, ವಿಶ್ವ ಸಾಹಿತ್ಯಕ್ಕೂ ಶೇಷ್ಠವಾದ ಕೊಡುಗೆಯನ್ನು ನೀಡಿದೆ. ವಚನ ಸಾಹಿತ್ಯದಲ್ಲಿ ಶ್ರೇಷ್ಠ ಗುಣಗಳಿದ್ದು, ಜೀವನ ವಿಧಾನ, ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾದ ತತ್ವಗಳು ವಚನ ಸಾಹಿತ್ಯದಲ್ಲಿದೆ. ಇದು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ಸಹಕಾರಿಯಾಗಿದೆ ಎಂದು ಹೇಳಿದರು.
ಮೈಸೂರು ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಪ್ರಸ್ತುತದಲ್ಲಿ ವಚನ ಪಾಠಶಾಲೆಗಳು ಅತ್ಯಗತ್ಯವಿದೆ. ಚಿಕ್ಕವಯಸ್ಸಿನಲ್ಲಿ ಬಸವ ಶರಣರ ವಚನಗಳನ್ನು ತಲೆಗೆ ತುಂಬಿದರೆ ಮಕ್ಕಳಿಗೆ ವಚನಗಳ ಅಭ್ಯಾಸ ಮಾಡಿಸಿದರೆ ಅವರು ಉನ್ನತವಾದ ಬದುಕನ್ನು ಬದುಕಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಕೆ.ಸಿ ಬಸವಣ್ಣ, ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಂ.ಆರ್. ಗಂಗಾಧರ, ಸಾಹಿತಿ ಸಿದ್ದಣ್ಣ ಲಂಗೋಟಿ ಇನ್ನಿತರರಿದ್ದರು.