ವಚನ ಸಾಹಿತ್ಯಕ್ಕೆ ನಾಂದಿಯಾಡಿದ ದಾಸಿಮಯ್ಯ

16rajesh1
Published on

ಚಾಮರಾಜನಗರ: ನಾಡಿನ ವಿಶಿಷ್ಟ ಸಾಹಿತ್ಯ ಪರಂಪರೆಗಳಲ್ಲಿ ಒಂದಾದ ವಚನಗಳಿಗೆ ಆಧ್ಯ ವಚನಕಾರ ಶ್ರೀದೇವರ ದಾಸಿಮಯ್ಯ ನಾಂದಿಯಾಡುವ ಮೂಲಕ, ಶ್ರೀಸಾಮಾನ್ಯರಿಗೆ ಜೀವನ ಮೌಲ್ಯವನ್ನು ಪ್ರಚುರಪಡಿಸಿದರು ಎಂದು ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ ಬಿ.ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದ ಧಾರ್ಮಿಕ ಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣದಲ್ಲೂ ದೇವರ ದಾಸಿಮಯ್ಯ ಅವರ ಕುರಿತು ಉಲ್ಲೇಖಗಳು ಇದೆ. ನೇಯ್ಗೆ ವೃತ್ತಿಯಲ್ಲಿ ತೊಡಗಿದ್ದ ಅವರು ಶಿವನ ಆರಾಧಕರಾಗಿದ್ದರು. ಶ್ರೀಶೈಲದಲ್ಲಿ ದೀಕ್ಷೆ ಪಡೆದ ಬಳಿಕ ಜ್ಞಾನ ಪ್ರಸಾರವನ್ನು ಮಾಡಿದರು. ಸುಮಾರು 10 ನೇ ಶತಮಾನದಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ದೇವರ ದಾಸಿಮಯ್ಯ ಶ್ರಮಿಸಿದರು ಎಂದರು.

ರಾಮನಾಥ ಅಂಕಿತ ನಾಮದಲ್ಲಿ ದಾಸಿಮಯ್ಯ ಅವರು ರಚಿಸಿದ 176 ವಚನಗಳು ಭಕ್ತಿ, ಕಾಯಕ, ದಾನ, ಪರೋಪಕಾರದ ಮಹತ್ವವನ್ನು ಒಳಗೊಂಡಿತ್ತು. ಅವರ ವಚನಗಳು ಬಸವಣ್ಣನವರ ಶರಣ ಚಳುವಳಿಯ ವಚನಗಳಿಗೆ ನಾಂದಿಯಾಯಿತು. ಇದನ್ನು ಆಧರಿಸಿಯೇ ಬಸವ ಪಂಥ ಪ್ರಾರಂಭವಾಯಿತು. ವಚನ ಮತ್ತು ದಾಸ ಸಾಹಿತ್ಯ ವಿಶ್ವಕ್ಕೆ ಶ್ರೇಷ್ಠ ಕೊಡುಗೆಯನ್ನು ನೀಡಿದೆ ಎಂದು ಬಣ್ಣಿಸಿದರು.

ದಾಸಿಮಯ್ಯ ಅವರನ್ನು ಒಳಗೊಂಡಂತೆ ವಚನ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿತು. ಜಾತೀಯತೆ, ಲಿಂಗ ತಾರತಮ್ಯದ ವಿರುದ್ಧ ಹೋರಾಟ ಮಾಡಿದ ದಾಸಿಮಯ್ಯ ಅವರು ಜನಸಾಮಾನ್ಯರ ಶಕ್ತಿಯಾಗಿದ್ದರು. ಅವರ ಸರಳವಾದ ಚವನಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸುರೇಶ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಯ್ಯ, ಸಮುದಾಯದ ಮುಖಂಡರಾದ ವೆಂಕಟೇಶ್, ರಂಗ ಶೆಟ್ಟಿ, ಹನೂರು ಕಾಂತರಾಜ್, ಸತ್ಯನಾರಾಯಣ್, ಬಸವರಾಜು, ಶಿವಕುಮಾರ್ ಇತರರು ಹಾಜರಿದ್ದರು.

ಬೆಳ್ಳಿ ರಥದಲ್ಲಿ ಭಾವಚಿತ್ರ ಮೆರವಣಿಗೆ:

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಬೆಳ್ಳಿ ರಥದಲ್ಲಿ ಶ್ರೀದೇವರ ದಾಸಿಮಯ್ಯ ಅವರ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆ ಶ್ರೀಭವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸಾಗಿ ವೇದಿಕೆ ಕಾರ್ಯಕ್ರಮ ನಡೆದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಂತ್ಯವಾಯಿತು. ಡೊಳ್ಳು ಕುಣಿತ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತುಂಬಿತು.

ದೇವರ ದಾಸಿಮಯ್ಯ ಅವರು ಜನಸಾಮಾನ್ಯರಿಗೆ ಅರ್ಥವಾಗುವಂತೆ 10 ನೇ ಶತಮಾನದಲ್ಲೇ ವಚನಗಳನ್ನು ರಚಿಸಿದ್ದರು. ಅವರ ಪ್ರತಿಯೊಂದು ವಚನಗಳು ಇಂದಿಗೂ ಪ್ರಸ್ತುತವಾಗಿದೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ.

-ಗೀತಾ ಹುಡೇದ, ಅಪರ ಜಿಲ್ಲಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net