

ಭಾಲ್ಕಿ: ವಚನ ಸಾಹಿತ್ಯ ರಕ್ಷಣೆಯಲ್ಲಿ ಚಿನ್ಮಯಿ ಜ್ಞಾನಿ ಚನ್ನಬಸವಣ್ಣನವರ ಕೊಡುಗೆ ಅನನ್ಯವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಚಿನ್ಮಯಿಜ್ಞಾನಿ ಚನ್ನಬಸವಣ್ಣನವರ ಜಯಂತಿ, ಚನ್ನಬಸವಣ್ಣ ವಚನಸುಧೆ ಗ್ರಂಥ ಲೋಕಾರ್ಪಣೆ ಮತ್ತು ಇಷ್ಟಲಿಂಗ ದೀಕ್ಷೆ, ಕಿರುಗುಣಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರು ವಚನ ಕಟ್ಟುಗಳನ್ನು ಸಂರಕ್ಷಿಸಲು ಜೀವವನ್ನೇ ಪಣಕ್ಕಿಟ್ಟದ್ದರು. ಇಂತಹ ಶರಣರಿಗೆ ಚನ್ನಬಸವಣ್ಣ ಮುಂದಾಳತ್ವ ವಹಿಸಿ ವಚನ ಕಟ್ಟುಗಳನ್ನು ಸಂರಕ್ಷಿತ ಸ್ಥಳಗಳಿಗೆ ಮುಟ್ಟಿಸುವ ಮೂಲಕ ವಚನ ಸಾಹಿತ್ಯದ ಉಳಿವು, ಪೋಷಣೆಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಸಂಸದ ಸಾಗರ್ ಖಂಡ್ರೆ ಚನ್ನಬಸವಣ್ಣ ವಚನಸುಧೆ ಗ್ರಂಥ ಬಿಡುಗಡೆಗೊಳಿಸಿದರು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಪ್ರಕಾಶ ದೇವರು ನೇತೃತ್ವ ವಹಿಸಿದ್ದರು.
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಗ್ರಾಮದ ಶರಣೆ ಕಾವೇರಿ ವಿಜಯಕುಮಾರ ಘಾಳೆ ಅವರ ಪುತ್ರಿ ಕುಮಾರಿ ಸಾನ್ವಿ ಮತ್ತು ಕುಮಾರ ವಿಶ್ರುತ ಅವರ ಕಿರುಗುಣಿ ಕಾರ್ಯಕ್ರಮ ನೆರವೇರಿತು.
ಮಾಜಿ ಶಾಸಕ ಪ್ರಕಾಶ ಖಂಡ್ರೆ, ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ರಾಚಪ್ಪ ಘಾಳೆ, ಸುಭಾಷ ಮೂಲಗೆ ಇತರರಿದ್ದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿ ವಂದಿಸಿದರು.