ವಚನ ಸಾಹಿತ್ಯ ಹಳಕಟ್ಟಿ ಕೊಡುಗೆ ಅನನ್ಯ

CTD 2 PA.GU HALAKATTI ADC-02
Published on


ಚಿತ್ರದುರ್ಗ:
ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಜನರಿಗೆ ಪರಿಚಯಿಸಲು ಡಾ.ಫ.ಗು.ಹಳಕಟ್ಟಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದು ಎಡಿಸಿ ಟಿ.ಜವರೇಗೌಡ ಹೇಳಿದರು.
ಹಳಕಟ್ಟಿ ಜನ್ಮದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿದರು.
ಹಳಕಟ್ಟಿ ಶ್ರಮದಿಂದಾಗಿ ವಚನಕಾರರನ್ನು ಮತ್ತು ವಚನ ಸಾಹಿತ್ಯವನ್ನು ಸಮಗ್ರವಾಗಿ ತಿಳಿಯಲು ಸಾಧ್ಯವಾಗಿದೆ. ನಶಿಸುತ್ತಿದ್ದ ಈ ಸಾಹಿತ್ಯದ ಮೂಲ ಪ್ರತಿಗಳನ್ನು ಮನೆ, ಮನೆಗಳಿಂದ ಸಂಗ್ರಹಿಸಿ ಪ್ರಕಟಿಸುವ ಮೂಲಕ ಅವರು ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರಳಿ ಬಸವರಾಜ್ ಮಾತನಾಡಿ, 12ನೇ ಶತಮಾನದ ಶಿವ ಶವರಣರು ಜಾತಿ, ಧರ್ಮಗಳ ಎಲ್ಲೆ ಮೀರಿ ವರ್ಗ ರಹಿತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಹಲವು ಸಂಶೋಧನೆಗಳ ನಡುವೆಯೂ ವಚನ ಸಾಹಿತ್ಯದ ಮೇಲೆ ಕ್ಷಕಿರಣ ಬೀರಿದರು ಎಂದರು.
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಎಂಬ ಸಾಮಾನ್ಯ ವ್ಯಕ್ತಿ ಒಂದು ಶಕ್ತಿಯಾಗಿ, ವಿಶ್ವವಿದ್ಯಾಲಯ, ಸರ್ಕಾರಗಳು ಮಾಡದೆ ಇರುವ ಬಹುದೊಡ್ಡ ಕಾರ್ಯವನ್ನು ಮಾಡಿದ್ದಾರೆ. ಹಳ್ಳಿ-ಹಳ್ಳಿ, ಮಠಗಳು ಹಾಗೂ ದೇವಾಲಯಗಳನ್ನು ಸೈಕಲ್‌ನಲ್ಲಿ ಸುತ್ತುವ ಮೂಲಕ ತಮ್ಮ ಬದುಕನ್ನು ವಚನ ಸಾಹಿತ್ಯಕ್ಕಾಗಿ ಧಾರೆ ಎರೆದಿದ್ದಾರೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಸಾವಿರಾರು ವಚನಗಳನ್ನು ಹಳಕಟ್ಟಿ ಅವರು ಸಂಗ್ರಹಿಸಿ, ಸಂರಕ್ಷಣೆ ಮಾಡಿದ್ದಾರೆ. ಅವರ ವೈಯಕ್ತಿಕ ಜೀವನ ದುಃಖದಿಂದ ಕೂಡಿತ್ತು. ವಚನಗಳನ್ನು ಮುದ್ರಿಸಲು ಮುದ್ರಣಾಲಯವನ್ನು ಸ್ಥಾಪಿಸಿದರು. ಇದಕ್ಕಾಗಿ ಅವರು ತಮ್ಮ ಮನೆ ಮಾರಾಟ ಮಾಡಿ, ಕೊನೆಯವರೆಗೂ ಬಡತನದಲ್ಲೇ ಬದುಕಿದ್ದರು ಎಂದು ಸ್ಮರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಕಸಾಪ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಸಂಘಟನಾ ಕಾರ‌್ಯದರ್ಶಿ ಶ್ರೀನಿವಾಸ್ ಮಳಲಿ, ಎಸ್.ಷಣ್ಮುಖಪ್ಪ, ಮಾಲತೇಶ್ ಅರಸ್, ಹಳಕಟ್ಟಿ ವಂಶಸ್ಥ ನಾಗರಾಜ್ ಇತರರು ಇದ್ದರು.

ವಿಜೇತ ವಿದ್ಯಾರ್ಥಿಗಳಿಗೆ ಗೌರವ
ಕಾರ್ಯಕ್ರಮದ ಅಂಗವಾಗಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪ್ರೌಢಶಾಲೆ, ಪ.ಪೂ. ಹಾಗೂ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಗೌರವಿಸಲಾಯಿತು.
ಪ್ರಿಯದರ್ಶಿನಿ ಪ್ರೌಢಶಾಲೆ ಎ.ಲತಾ (ಪ್ರ), ಬಾಲಕಿಯರ ಪ್ರೌಢಶಾಲೆ ಎಸ್.ಸೌಮ್ಯಶ್ರೀ (ದ್ವಿ), ಬೃಹನ್ಮಠ ಪ್ರೌಢಶಾಲೆಯ ಎಂ.ಮಾನಸಾ (ತೃ).
ಬಾಲಕರ ಸರ್ಕಾರಿ ಪಪೂ ಕಾಲೇಜಿನ ಜಿ.ಎಸ್.ಸುದರ್ಶನ್ (ಪ್ರ), ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಕಾಶ್ (ದ್ವಿ), ಚಿನ್ಮೂಲಾದ್ರಿ ಕಾಲೇಜಿನ ಎಸ್.ಎಚ್.ಸಾಕ್ಷಿ (ತೃ).
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್.ಸುಮಾ (ಪ್ರ), ಜೆ.ಸಿ.ಅಂಜಲಿ (ದ್ವಿ), ಎ.ಎನ್.ಸೃಷ್ಟಿ ತೃತೀಯ ಸ್ಥಾನ ಪಡೆದಿದ್ದು, ಅವರೆಲ್ಲರಿಗೂ ನಗದು ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು.

ಕವಿಗೋಷ್ಠಿ
ಹಳಕಟ್ಟಿ ಹಾಗೂ ವಚನ ಸಾಹಿತ್ಯ ಕುರಿತಂತೆ ಕಸಾಪ ಜಿಲ್ಲಾ ಮಹಿಳಾ ಘಟಕದ ಸದಸ್ಯರು ಕವಿಗೋಷ್ಠಿ ಆಯೋಜಿದ್ದರು. ಚಂದ್ರಿಕಾ ಸುರೇಶ್, ಮೀರಾ ನಾಡಿಗ್, ರೀನಾ ವೀರಭದ್ರಪ್ಪ, ಗೀತಾ ಭರಮಸಾಗರ, ಪೂಜಾ ಅಜಯ್, ತಿಪ್ಪಮ್ಮ, ನಾಗರತ್ನಾ ಶಿವಣ್ಣ, ಶೈಲಜಾ ಜಯಕುಮಾರ್ ಇತರರು ಕವನಗಳನ್ನು ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net