ವಚನ ಸಾಹಿತ್ಯ ಎಂದೆಂದಿಗೂ ಪ್ರಸ್ತುತ

11
Published on

ಮೈಸೂರು: ವಚನ ಸಾಹಿತ್ಯ ಎಂದೆಂದಿಗೂ ಪ್ರಸ್ತುತ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ ಕೃಷ್ಣಕುಮಾರ್ ಹೇಳಿದರು.


ಜಿಲ್ಲಾ ಸಾಹಿತ್ಯ ಪರಿಷತ್, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ವೈ.ವಿ.ಯಶೋದಾ ರಾಮಕೃಷ್ಣ ಅವರ ‘ವಚನ ಜ್ಯೋತಿ’ ಆಧುನಿಕ ವಚನಗಳ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಉಜ್ವಲ ಕಾಲ. ವಚನಗಳು ಸಾಹಿತ್ಯ ಪ್ರಕಾರದೊಂದಿಗೆ ಜೀವನ ವಿಧಾನವೂ ಆಗಿದೆ ಎಂದರು.
ಯಶೋದಾ ಅವರು ಅರ್ಥಮುಖಿ ಮತ್ತು ಸಮಾಜಮುಖಿ ಎಂಬ ಎರಡು ಬಗೆಯ ವಚನ ರಚಿಸಿದ್ದಾರೆ. ಅವರು ಮತ್ತಷ್ಟು ಸಮಾಜಮುಖಿ ವಚನ ರಚಿಸಬೇಕು ಎಂದು ಸಲಹೆ ನೀಡಿದರು.


ಕೃತಿ ಕುರಿತು ಮಾತನಾಡಿದ ಪ್ರಾಧ್ಯಾಪಕ ಪ್ರೊ.ಬೆಸೂರು ಮೋಹನ್ ಪಾಳೇಗಾರ್, ವಚನ ಚಿಂತನೆಗಳನ್ನು ಪಾಲನೆ ಮಾಡಿದರೆ ಜಾತಿ, ಹಣ, ರಾಜಕಾರಣದ ರೋಗ ಸುಳಿಯುವುದಿಲ್ಲ. ಸಕಲ ಜೀವಾತ್ಮಗಳಿಗೂ ಲೇಸನ್ನು ಬಯಸುವುದೇ ವಚನದ ಶಕ್ತಿ. ಆದ್ದರಿಂದಲೇ ವಚನ ಸಾಹಿತ್ಯ ಸದೃಢವಾಗಿದೆ ಎಂದು ಹೇಳಿದರು.


ಸಮಾನತೆ, ಸಹೋದರತ್ವವೇ ವಚನಗಳ ಮೂಲ ಆಶಯ. ಯಾಂತ್ರಿಕ ಬದುಕನ್ನು ಆರಿಸಿಕೊಂಡಿರುವ ಇಂದಿನ ಸಂದರ್ಭದಲ್ಲಿ ವಚನಗಳ ಅಗತ್ಯ ಮತ್ತು ಮಹತ್ವ ಹೆಚ್ಚಿದೆ ಎಂದರು.


ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಗೆರೆ ಗೋಪಾಲ್, ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ ಸಂತೋಷ್, ಸಾಹಿತಿ ವೈ.ವಿ ಯಶೋದಾ ರಾಮಕೃಷ್ಣ, ಹೇಮಗಂಗಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷೆ ಎ.ಹೇಮಗಂಗಾ, ಕಾರ್ಯದರ್ಶಿ ಬಿ.ಶೋಭಾ, ಪ್ರಕಾಶಕ ಓಂಕಾರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net