'ವಚನ ಸಾಹಿತ್ಯ ಆರೋಗ್ಯಕರ ಸಾಮಾಜಕ್ಕೆ ದಿವ್ಯೌಷಧ'

Published on

ಮೈಸೂರು: ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಪ್ರಸ್ತುತ ಕಾಲದಲ್ಲೂ ಸಮಾಜದ ಆರೋಗ್ಯವನ್ನು ಕಾಪಾಡುವ ದಿವ್ಯೌಷಧವಾಗಿದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರಯ್ಯ ಅಭಿಪ್ರಾಯಪಟ್ಟರು.

ಶರಣ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ಕುವೆಂಪುನಗರದ ಪ್ರಮತಿ ಹಿಲ್‌ವಿವ್ಯೆ ಅಕಾಡೆಮಿಯ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ವಚನ ವಾಚನ, ವ್ಯಾಖ್ಯಾನ ಮತ್ತು ಉಪನ್ಯಾಸ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಸಂಪೂರ್ಣ, ಸಮಗ್ರ ಸಾಮಾಜಿಕ ಪ್ರಗತಿಯನ್ನು ತಾರತಮ್ಯವಿಲ್ಲದಂತೆ ಸದೃಢಗೊಳಿಸಲು ವಚನ ಸಾಹಿತ್ಯ ಬಹಳ ಸಮರ್ಥವಾಗಿದೆ. ಮಾನವನ ವೈಚಾರಿಕ ಜ್ಞಾನ ವಿಕಾಸಕ್ಕೆ ಅರ್ಥಪೂರ್ಣವಾದ ತಳಹದಿಯನ್ನು 12ನೇ ಶತಮಾನದ ಶರಣರ ವಚನಗಳು ಹಾಕಿಕೊಡುತ್ತವೆ ಎಂದರು.

ವಚನಗಳನ್ನು ಓದಿ, ಅರ್ಥೈಸಿಕೊಂಡರೆ ಜ್ಞಾನದ ಬೆಳವಣಿಗೆಯಲ್ಲದೇ, ಜೀವನವೂ ಬೆಳವಣಿಗೆಯಾಗುತ್ತದೆ. ದೇಶದ ಅಭಿವೃದ್ಧಿಯೂ ಆಗುತ್ತದೆ. ಶರಣರ ಕಾಯಕತತ್ವವೂ ಅನೇಕ ಅರ್ಥಶಾಸ್ತ್ರಜ್ಞರು ಪ್ರಕಟಿಸಿರುವ ತತ್ವ-ಸಿದ್ಧಾಂತಗಳಿಗೆ ಸ್ಫೂರ್ತಿಯಾಗಿವೆ ಎಂದರು.

ಲೌಕಿಕ ಮತ್ತು ಅಲೌಕಿಕ ಸಾಧನೆಗೆ ವಚನ ಸಾಹಿತ್ಯವು ಮೂಲ ಮಂತ್ರವಾಗಿದೆ. ವಚನಗಳು ಸಾಮಾನ್ಯ ಓದು ಬಲ್ಲವರಿಗೂ ಸರಳವಾಗಿ ಅರ್ಥವಾಗುತ್ತವೆ. ಮಹಿಳೆಯರಿಗೆ ಸಮಾನತೆಯನ್ನು ನೀಡಿದ ಕಲ್ಯಾಣದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಎನ್ನುವ ಖ್ಯಾತಿಯನ್ನು ಹೊಂದಿರುವುದಲ್ಲದೇ ನಾಡಿನಲ್ಲಿ ಪ್ರಜಾಪ್ರಭುತ್ವದ ಬೀಜವನ್ನು ಬಿತ್ತಿ ಬೆಳೆದ ಜಾಗವಾಗಿದೆ. ನಮ್ಮ ದೇಶದ ಸಂವಿಧಾನದಲ್ಲೂ ಕೂಡ ವಚನಗಳ ಅಂಶಗಳು ಅಡಕವಾಗಿರುವುದು ಅವುಗಳ ಮಹತ್ವ ಎಂತಹದ್ದು ಎಂದು ಗೊತ್ತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಚನ ವಾಚನ ಮತ್ತು ವ್ಯಾಖ್ಯಾನ ಸ್ಪರ್ಧೆಯಲ್ಲಿ ವಿಜೇತರಾದ ಸಾಯಿ ಪ್ರಮಥ್ (ಪ್ರ), ಪೋಷಿತ(ದ್ವಿ), ಟಿ.ಎಸ್.ಶ್ರಾವಣಿ (ತೃ), ದೀಕ್ಷಾ, ಶ್ರದ್ಧಾ (ಸಮಾಧಾನಕರ) ಅವರಿಗೆ ಪ್ರಮತಿ ಹಿಲ್‌ವಿವ್ಯೆ ಅಕಾಡೆಮಿ ಕೋಶಾಧಿಕಾರಿ ಎಸ್.ಫಣಿರಾಜ್ ಬಹುಮಾನ ವಿತರಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಟಿ.ಎಸ್.ಕುಮಾರಸ್ವಾಮಿ, ದತ್ತಿ ದಾಸೋಹಿ ಎಂ.ಎ. ಚಿದಾನಂದ, ಪ್ರಾಂಶುಪಾಲ ಸುದರ್ಶನ್, ಆಯೋಜಕರಾದ ಬಸವಣ್ಣ, ಡಾ.ಎಚ್. ಮುದ್ದುಮಲ್ಲೇಶ್, ಜಗದೀಶ್ ಚಿಕ್ಕಮಠ, ಮಂಜುಳಾ ರವಿ, ಸುದರ್ಶನ, ಚಂದ್ರಪ್ಪ, ಚನ್ನಬಸಪ್ಪ, ಉಮಾಪತಿ, ನಂದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net