

ಬಸವಕಲ್ಯಾಣ: ೧೨ನೇ ಶತಮಾನದಲ್ಲಿ ಅಂತಃಪ್ರಜ್ಞೆಗೆ, ಅನುಭವಕ್ಕೆ ತಿಳಿಯುವ ಅಧ್ಯಾತ್ಮ ಸಂದೇಶ ಕೊಟ್ಟು, ವಚನ ಮತ್ತು ವೇದಗಳ ಆಂತರ್ಯವನ್ನು ವಚನಕಾರರು ತಿಳಿಸಿದರು. ಗುರು ಲಿಂಗ ಜಂಗಮ ಮತ್ತು ಜೀವ-ಜಡ-ದೇವರ ಸಂಬಂಧದ ಜಗತ್ತು ಸತ್ಯ, ಸುಳ್ಳಲ್ಲ. ಜೀವನಿಗೆ ಅನಂತಕಾಲದ ಸುಖ ಅರ್ಥಾತ್ ಮುಕ್ತಿ ಇದೆ ಎಂಬುದನ್ನು ಸಾರಿದರು ಎಂದು ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ನಗರದ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವಿರಶೈವ ಸದ್ಬೋಧನ ಸಂಸ್ಥೆ ತಾಲೂಕು ಘಟಕ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆಯ ಶ್ರಾವಣ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಚನಗಳು ಪಾರಮಾರ್ಥಿಕವಾಗಿ ತಂದೆ-ತಾಯಿ-ಬAಧು-ಬಳಗ ಎಲ್ಲವನ್ನಾಗಿ ದೇವರ ಸ್ಥಾನವನ್ನು ತೋರಿಸಿ ಕೊಟ್ಟ ಪ್ರತಿ ಧ್ವನ್ಯಾತ್ಮಕ ಶಬ್ದಗಳೂ ಓಂಕಾರ ವಾಚ್ಯನಾದ ಭಗವಂತನ ಮಹಿಮೆ ಸಾರುತ್ತವೆ. ಪರಬ್ರಹ್ಮನು ಒಬ್ಬನೇ ಸ್ವತಂತ್ರ. ಅವನೇ ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮೋಕ್ಷಗಳೆಂಬ ಸಕಲಕ್ಕೂ ಮುಖ್ಯಕಾರಣ ಎಂದರು.
ಭಗವAತ ಅಪ್ರಾಕೃತನಾದ್ದರಿಂದ ನಮ್ಮಂತೆ ಜಡಪ್ರಕೃತಿಯ ಶರೀರ ಇಲ್ಲದಿರುವುದರಿಂದ ಅವನನ್ನು ನಿರ್ಗುಣ, ನಿರಾಕಾರ ಎಂದು ವೇದವಾಕ್ಯಗಳು ವಚನಗಳು ಹೇಳುತ್ತವೆ.
ಮುಖ್ಯ ಅತಿಥಿ ಮಂಜುನಾಥ ಮಠಪತಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಲವಾರೆ ಸ್ವಾಗತಿಸಿದರು. ಶರಣಬಸಪ್ಪ ಅಲಗುಡೆ ಸಂಚಾಲನೆ ಮಾಡಿದರು. ಸಾಮೂಹಿಕವಾಗಿ ಮಂಗಳಾರತಿ ಹಾಡಿದರು.
ಪ್ರಮುಖರಾದ ಶಿವಲಿಂಗ ಸ್ವಾಮಿ, ಮಂಜುನಾಥ ಸ್ವಾಮಿ, ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಲಿಂಗಣ್ಣಗೌಡ ಚನ್ನೂರ, ಸಿದ್ದಲಿಂಗಪ್ಪ ಗೌಡ, ರುದ್ರಮುನಿ ಚನ್ನೂರ, ಬಾಬುರಾವ ಚಳಕಾಪುರೆ, ಸವಿತಾ ಸ್ವಾಮಿ, ಶಿವಕುಮಾರ ಕೌಠೆ, ಕಮಲಾಕರ ಬಿರಾದಾರ ಇತರರಿದ್ದರು.