

ಭಾಲ್ಕಿ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿರುವ ವಚನಗಳು ಸರ್ವಶ್ರೇಷ್ಠವಾಗಿವೆ. ಕಾನೂನಿನ ಎಲ್ಲ ಆಶಯಗಳು ವಚನಗಳಲ್ಲಿ ಅಡಗಿವೆ. ಹಾಗಾಗಿ ವಚನಗಳನ್ನು ಪಾಲಿಸಿ ಅದರಂತೆ ನಡೆದರೆ ಕಾನೂನು ಪಾಲಿಸಿದಂತಾಗುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಆನಂದ ಕೊಣ್ಣೂರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ವಚನ ಜಾತ್ರೆ-೨೦೨೫ ಮತ್ತು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ ೨೬ನೇ ಸ್ಮರಣೋತ್ಸಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ ವಚನ ಪಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬದುಕಿನಲ್ಲಿ ವಚನಗಳನ್ನು ಅನುಸರಿದರೇ ಕಾನೂನಿನನ್ನು ಗೌರವಿಸಿದಂತಾಗುತ್ತದೆ. ವ್ಯಕ್ತಿಯ ಶಾಂತಿ, ನೆಮ್ಮದಿ, ಸಂತೃಪ್ತ ಜೀವನಕ್ಕೆ ವಚನಗಳು ಪೂರಕವಾಗಿವೆ. ಆದ್ದರಿಂದ ಮಕ್ಕಳಿಗೆ ಆರಂಭದಿಂದಲೇ ವಚನಗಳ ಮಹತ್ವನ್ನು ತಿಳಿ ಹೇಳುವ ಕೆಲಸ ಆಗಬೇಕು. ಪ್ರತಿಯೊಬ್ಬರೂ ವಚನಗಳನ್ನು ಪಠಣ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ವಚನಗಳ ಅಧ್ಯಯನ ಅತ್ಯಂತ ಅವಶ್ಯಕವಾಗಿವೆ. ವಚನಗಳು ಆತ್ಮವಿಶ್ವಾಸ, ಆತ್ಮಬಲ ಬಲ ಹೆಚ್ಚಿಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಶೋಭಾ ಪ್ರಭು ಸಾವಳೆ ಬಸವ ಗುರುವಿನ ಪೂಜೆ ನೆರವೇರಿಸಿ ಕೊಟ್ಟರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಮಹಾಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ದೇವರು, ಶ್ರೀ ಸಿದ್ಧಬಸವ ದೇವರು, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ, ಸಾಹಿತಿ ರಾಜು ಜುಬರೆ, ವಚನ ಪಾರಾಯಣ ಸೇವಾ ಸಮಿತಿ ಅಧ್ಯಕ್ಷೆ ರೇಖಾ ಶಿವರಾಜ ಜ್ಯೋತೆಪ್ಪ, ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ವಾಲೆ ಮತ್ತು ಭಕ್ತರು ಪಾಲ್ಗೊಂಡಿದ್ದರು.
ವಚನ-೨೦೨೫ ಮತ್ತು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ ೨೬ನೇ ಸ್ಮರಣೋತ್ಸವ ಅಂಗವಾಗಿ ಸಾಮೂಹಿಕ ವಚನ ಪಾರಾಯಣ ಏರ್ಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆ ೬ ರಿಂದ ೭ರವರೆಗೆ ನಡೆಯಲಿದ್ದು ಜಿಲ್ಲೆಯ ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್ ಬಸವಕಲ್ಯಾಣ
ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಬಸವಣ್ಣವರ ಅನುಯಾಯಿ ಆಗಿ ಈ ಭಾಗವನ್ನು ಸಮೃದ್ಧಗೊಳಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ವಚನ ಜಾತ್ರೆ-೨೦೨೫ ಮತ್ತು ಪೂಜ್ಯರ ಸ್ಮರಣೋತ್ಸವ ನಿಮಿತ್ತ ವಚನ ಪಾರಾಯಣ ಏರ್ಪಡಿಸಿರುವುದು ಸಂತಸದ ಸಂಗತಿ.
| ಆನಂದ ಕೊಣ್ಣೂರು
ನ್ಯಾಯಾಧೀಶ, ಜೆಎಂಎಫ್‌ಸಿ ಭಾಲ್ಕಿ