

ಹೊಸದುರ್ಗ: ಪ್ರಾಥಮಿಕ-ಪ್ರೌಢಶಾಲಾ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಚನ-ಹರಿದಾಸ ಸಾಹಿತ್ಯವನ್ನು ಹಾಡದಂತೆ ಶಾಲಾ ಶಿಕ್ಷಣ ಇಲಾಖೆ ನಿರ್ಬಂಧ ವಿಧಿಸಿರುವುದು ಮಹನೀಯರಿಗೆ ಮಾಡಿದ ಅಪಮಾನ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕೆ ಹೇಳಿಕೆ ನೀಡಿರುವ ಶ್ರೀಗಳು, ಪ್ರತಿಭಾ ಕಾರಂಜಿ ಸ್ಪರ್ಧೆಯ ಲಘು ಸಂಗೀತ ವಿಭಾಗದಲ್ಲಿ ವಚನ-ದಾಸ ಸಾಹಿತ್ಯ ಹಾಡುವುದಕ್ಕೆ ಅನೇಕ ವರ್ಷಗಳಿಂದ ನಿಷೇಧ ಇರುವ ವಿಷಯ ತಿಳಿದು ಆಘಾತವಾಯಿತು ಎಂದು ಹೇಳಿದ್ದಾರೆ.
ವಚನ ಮತ್ತು ದಾಸ ಸಾಹಿತ್ಯ ಲಘು ಸಂಗೀತದ ದಾಟಿಯಲ್ಲಿವೆ ಎನ್ನುವುದಕ್ಕೆ ಅವು ಜನಪ್ರಿಯವಾಗಿರುವುದೇ ಸಾಕ್ಷಿ. ಅದರೂ ಶಿಕ್ಷಣ ಇಲಾಖೆ ಅದನ್ನು ಪರಿಗಣಿಸದೆ ಈ ಸಾಹಿತ್ಯವನ್ನು ಕಡೆಗಣಿಸಿರುವುದು ಕನ್ನಡದ ಆತ್ಮವನ್ನೇ ಅವಮಾನಿಸಿದಂತಾಗಿದೆ ಎಂದು ಬೇಸರಿಸಿದ್ದಾರೆ.
ಎರಡು ದಿನಗಳ ಹಿಂದೆ ಅಧ್ಯಾಪಕರೊಬ್ಬರಿಂದ ಈ ವಿಷಯ ತಿಳಿಯುತ್ತಿದ್ದಂತೆ, ತಕ್ಷಣ ಆದೇಶ ಪ್ರತಿಯನ್ನು ತರಿಸಿ ನೋಡಿದಾಗ ಅಶ್ಚರ್ಯವಾಯಿತು. ಅನೇಕ ವರ್ಷಗಳಿಂದಲೂ ಇದು ಜಾರಿಯಲ್ಲಿದ್ದರೂ ಯಾರು ಪ್ರಶ್ನಿಸದಿರುವುದು ವಿಷಾದನೀಯ. ಇದೊಂದು ವ್ಯವಸ್ಥಿತ ಪಿತೂರಿ ಎನಿಸುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಎಲ್ಲ ಶಾಲೆಗಳಲ್ಲೂ ಅಗತ್ಯ ಪ್ರಮಾಣದಲ್ಲಿ ಸಂಸ್ಕೃತ ಹಾಗೂ ಉರ್ದು ಶಿಕ್ಷಕರಿಲ್ಲದಿದ್ದರೂ ಧಾರ್ಮಿಕ ವಿಭಾಗದಲ್ಲಿ ಧರ್ಮಗ್ರಂಥ ಪಠಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದರೂ ಕನ್ನಡದ ವಚನಗಳಿಗೆ ಹಾಗೂ ದಾಸ ಸಾಹಿತ್ಯಕ್ಕೆ ಏಕೆ ಅವಕಾಶ ನೀಡಿಲ್ಲ ಎನ್ನವುದು ಪ್ರಶ್ನಾರ್ಹವಾಗಿದೆ.
ಪ್ರತ್ಯೇಕ ವಿಭಾಗದಡಿ ವಚನ ಹಾಗೂ ದಾಸ ಸಾಹಿತ್ಯಕ್ಕೆ ಅವಕಾಶ ನೀಡಿದರೆ ಮಕ್ಕಳ ಮನೋಭೂಮಿಕೆಯಲ್ಲಿ ಸತ್ವಯುತ, ವೈಜ್ಞಾನಿಕ ಬೀಜ ಬಿತ್ತಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಶಿಕ್ಷಣ ಸಚಿವರು, ಅಧಿಕಾರಿಗಳು ಕೂಡಲೇ ಎಚ್ಚೆತ್ತು ಆಗಿರುವ ದೋಷಗಳನ್ನು ಸರಿಪಡಿಸಬೇಕೆಂದು ಶ್ರೀಗಳು ಆಗ್ರಹಪಡಿಸಿದ್ದಾರೆ.